ನವದೆಹಲಿ: “ಭಾರತದಲ್ಲಿರುವ ಮುಸ್ಲಿಮರು ಕೂಡ ಹಿಂದುಗಳ ಡಿಎನ್‌ಎ ಹೊಂದಿದ್ದಾರೆ” ಎಂದು ಹೇಳುತ್ತಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಈಗ, “ಮುಸ್ಲಿಮರು ಕೂಡ ನಮ್ಮವರೇ” ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಸೌಹಾರ್ದದ ಸಂದೇಶ ರವಾನಿಸುವ ಜತೆಗೆ 2024ರ ಲೋಕಸಭೆ ಚುನಾವಣೆಗೂ (Lok Sabha Election 2024) ಮೊದಲೇ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕುರಿತು ದೇಶದ ಬಹುತೇಕ ಮುಸ್ಲಿಮರ ಅಭಿಪ್ರಾಯ ಬದಲಿಸುವ ಪ್ರಯತ್ನ ಮಾಡಿದ್ದಾರೆ.
ಸಂಘದ ನಾಯಕರೊಂದಿಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಮುಸ್ಲಿಮರ ಆಚರಣೆಗಳು, ಸಂಪ್ರದಾಯಗಳು ಬೇರೆ ಆಗಿರಬಹುದು. ಆದರೆ, ಅವರು ಕೂಡ ನಮ್ಮವರೇ. ಅವರು ನಮ್ಮಿಂದ ಎಂದಿಗೂ ಪ್ರತ್ಯೇಕ ಅಲ್ಲ. ಅವರಿಗೂ ಈ ದೇಶದ ಮೇಲೆ ಹಕ್ಕಿದೆ. ಮುಸ್ಲಿಮರ ಹಕ್ಕುಗಳನ್ನು ಕೂಡ ನಾವು ಗೌರವಿಸಬೇಕು. ಅವರು ಕೂಡ ಈ ದೇಶದ ಪ್ರಜೆಗಳೇ” ಎಂದು ಹೇಳಿದ್ದಾರೆ. ಸಂಘದ ಸಭೆಯಲ್ಲಿ ಮುಸ್ಲಿಂ ಸಮುದಾಯದ ಹಲವು ನಾಯಕರು ಕೂಡ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.
'मुस्लिम भी हमारे हैं, यह देश जितना हमारा है उतना ही उनका है' : मोहन भागवत pic.twitter.com/94Egfsornx
— Bolta Hindustan (@BoltaHindustan) September 26, 2023
ಸಂಘದ ವಿರೋಧಿಗಳು ಕೂಡ ನಮಗೆ ಮುಖ್ಯ
“ಒಂದಿಡೀ ಸಮಾಜವನ್ನೇ ಒಗ್ಗೂಡಿಸುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉದ್ದೇಶವಾಗಿದೆ. ಇದಕ್ಕಾಗಿ ನಾವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ. ಆರ್‌ಎಸ್‌ಎಸ್‌ಅನ್ನು ವಿರೋಧಿಸುವವರನ್ನು ಕೂಡ ನಾವು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ” ಎಂದು ಹೇಳಿದರು. ಇನ್ನು ದೇಶದ ಬಗ್ಗೆ ಮಾತನಾಡಿದ ಅವರು, ಪಾಕಿಸ್ತಾನವನ್ನು ವಿರೋಧಿಸುವ ದೇಶಗಳಿಗೆ ನಾವು ಸಹಾಯ ಮಾಡಬೇಕು. ಇತ್ತೀಚೆಗೆ ಬಾಂಗ್ಲಾದೇಶಕ್ಕೆ ನಾವು ನೆರವು ನೀಡಿದ್ದೇ ಇದಕ್ಕೆ ಉದಾಹರಣೆ” ಎಂದು ತಿಳಿಸಿದರು.
ಇದನ್ನೂ ಓದಿ: Mohan Bhagwat: ಮೀಸಲಾತಿಯನ್ನು ಬೆಂಬಲಿಸಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್; ಅವರು ಹೇಳಿದ್ದಿಷ್ಟು
ಸನಾತನ ಧರ್ಮದ ಬಗ್ಗೆ ತಿಳಿವಳಿಕೆ ಇಲ್ಲ
“ದೇಶದಲ್ಲಿ ತುಂಬ ಜನರಿಗೆ ಸನಾತನ ಧರ್ಮದ ಬಗ್ಗೆ ಗೊತ್ತಿಲ್ಲ. ಹಾಗಾಗಿಯೇ, ಅಂತಹ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಹಿಂದು ಧರ್ಮದ ಬಗ್ಗೆ ತುಂಬ ಜನ, ತುಂಬ ಸಂದರ್ಭಗಳಲ್ಲಿ ಟೀಕಿಸಿದ್ದಾರೆ. ಆದರೆ, ಹಿಂದು ಧರ್ಮದ ಆಚಾರ-ವಿಚಾರಗಳು, ಮೌಲ್ಯಗಳು ಸೇರಿ ಎಲ್ಲವನ್ನೂ ಅರ್ಥ ಮಾಡಿಕೊಂಡ ಬಳಿಕ ವಿರೋಧಿಸಿದವರೇ ಹಿಂದು ಧರ್ಮವನ್ನು ಪಾಲನೆ ಮಾಡಿದವರ ಸಂಖ್ಯೆ ಜಾಸ್ತಿ ಇದೆ” ಎಂದರು. ಸನಾತನ ಧರ್ಮದ ನಿರ್ಮೂಲನೆಯಾಗಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಸಂಬಂಧಿಸಿದಂತೆ ಭಾಗವತ್ ಪ್ರತಿಕ್ರಿಯೆ ನೀಡಿದ್ದಾರೆ.