ನವದೆಹಲಿ: “ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯ ಅಥವಾ ಬೆದರಿಕೆ ಇಲ್ಲ. ಅವರು ತುಂಬ ಸುರಕ್ಷಿತವಾಗಿದ್ದಾರೆ. ಆದರೆ, ಮುಸ್ಲಿಮರು ತಮ್ಮದೇ ಸರಿ, ತಾವೇ ಶ್ರೇಷ್ಠ ಎಂಬ ಪ್ರತಿಪಾದನೆಯನ್ನು ಬಿಡಬೇಕು. ಇಂತಹ ಅಬ್ಬರಗಳನ್ನು, ಅಬ್ಬರದ ವಾಕ್ಚಾತುರ್ಯವನ್ನು ನಿಲ್ಲಿಸಬೇಕು” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಆರ್ ಎಸ್ ಎಸ್ ಮುಖವಾಣಿಗಳಾದ ಪಾಂಚಜನ್ಯ ಹಾಗೂ ಆರ್ಗನೈಸರ್‌ಗೆ ಸಂದರ್ಶನ ನೀಡಿದ ಅವರು, “ದೇಶದಲ್ಲಿರುವ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಅವರು ತಮ್ಮ ನಂಬಿಕೆಗಳನ್ನು, ಆಚಾರ-ವಿಚಾರಗಳನ್ನು ಪಾಲಿಸಲು ಸ್ವತಂತ್ರರಾಗಿದ್ದಾರೆ. ಅವರು ಈಗಿನ ಸಂಪ್ರದಾಯಗಳನ್ನು ಪಾಲಿಸಬಹುದು ಅಥವಾ ಅವರ ಪೂರ್ವಜರ ಆಚರಣೆಗಳ ಮೊರೆ ಹೋಗಬಹುದು. ಆದರೆ, ನಾವೇ ಶ್ರೇಷ್ಠ ಎಂಬ ಅಬ್ಬರವನ್ನು ನಿಲ್ಲಿಸಬೇಕು. ಅಷ್ಟಕ್ಕೂ, ಭಾರತದಲ್ಲಿರುವ ಹಿಂದುಗಳು, ಕಮ್ಯುನಿಸ್ಟರು ಸೇರಿ ಎಲ್ಲರೂ ಇದೇ ಮಾದರಿಯನ್ನು ಅನುಸರಿಸಬೇಕು. ಹಿಂದುಸ್ತಾನವು ಹಿಂದುಸ್ತಾನವಾಗಿಯೇ ಉಳಿಯಬೇಕು” ಎಂದು ಹೇಳಿದ್ದಾರೆ.
ದೇಶದ ಒಗ್ಗಟ್ಟು ಹಾಗೂ ಮುಸ್ಲಿಮರ ಮನಸ್ಥಿತಿ ಬಗ್ಗೆ ಪ್ರತಿಪಾದನೆ ಮುಂದುವರಿಸಿದ ಭಾಗವತ್, “ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಎಲ್ಲರಲ್ಲೂ ಇದೇ ಭಾವನೆ ಒಡಮೂಡಬೇಕು. ನಾವು (ಮುಸ್ಲಿಮರು) ಈ ನೆಲವನ್ನು ಆಳಿದ್ದೇವೆ, ಮುಂದೆಯೂ ಆಳುತ್ತೇವೆ, ನಾವು ಒಗ್ಗಟ್ಟಾಗಿರಲು ಸಾಧ್ಯವಿಲ್ಲ ಎಂಬ ಮನಸ್ಥಿತಿ ಇರಕೂಡದು. ನಾವೇ ಅಗ್ರಜರು, ನಾವೇ ಉತ್ಕೃಷ್ಟ ಸಮುದಾಯದವರು ಎಂಬ ಪ್ರತಿಪಾದನೆಯನ್ನು ಮುಸ್ಲಿಮರು ನಿಲ್ಲಿಸಬೇಕು” ಎಂದಿದ್ದಾರೆ.
ಹಿಂದುತ್ವದ ಕುರಿತು ಭಾಗವತ್ ವ್ಯಾಖ್ಯಾನ
ಹಿಂದುತ್ವದ ಕುರಿತು ಕೂಡ ಮೋಹನ್ ಭಾಗವತ್ ಅವರು ವ್ಯಾಖ್ಯಾನಿಸಿದ್ದಾರೆ. “ಹಿಂದುತ್ವ ನಮ್ಮ ಗುರುತು, ಇದೇ ನಮ್ಮ ರಾಷ್ಟ್ರೀಯತೆ, ಇದೇ ನಮ್ಮ ನಾಗರಿಕತೆಯಾಗಿದೆ. ಹಿಂದುತ್ವವು ಎಲ್ಲರೂ ನಮ್ಮವರೂ ಎಂಬುದನ್ನು ಸಾರುತ್ತದೆ. ನಮ್ಮದು ಮಾತ್ರ ಪರಮ ಸತ್ಯ, ಬೇರೆಯವರದ್ದು ಸರಿಯಲ್ಲ ಎಂಬುದಾಗಿ ಎಂದೂ ಹೇಳುವುದಿಲ್ಲ. ನೀವು ನಿಮ್ಮ ಪ್ರಕಾರ ಸರಿ, ನಾವು ನಮ್ಮ ಪ್ರಕಾರ ಸರಿ. ಜಗಳ, ಮತ್ಸರ, ಸಂಘರ್ಷ ಬೇಡ, ಎಲ್ಲರೂ ಒಗ್ಗೂಡಿ ಸಾಗೋಣ ಎಂಬುದನ್ನೇ ಹಿಂದುತ್ವ ಹೇಳುತ್ತದೆ. ಇಂತಹ ಮೌಲ್ಯಗಳು ಎಲ್ಲಿಯವರೆಗೆ ಪಾಲನೆಯಲ್ಲಿರುತ್ತವೆಯೋ, ಅಲ್ಲಿಯವರೆಗೂ ಭಾರತ ಸುರಕ್ಷಿತ” ಎಂದು ತಿಳಿಸಿದ್ದಾರೆ.
“ಭಾರತವು ಜಗತ್ತಿಗೇ ಒಗ್ಗಟ್ಟನ್ನು ಸಾರುತ್ತದೆ. ಇದೇ ಭಾರತದ ಅಂತಃಸತ್ವವಾಗಿದೆ. ಮಾನವತೆಗೆ ಜತೆಗೆ ಮೌಲ್ಯಗಳನ್ನೂ ನೀಡುತ್ತದೆ. ಆದರೆ, ಒಂದೊಮ್ಮೆ ಹಿಂದು ಸಮುದಾಯವು ಮರೆಯಾದರೆ ದೇಶದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ನಾವೇ ಶ್ರೇಷ್ಠ, ನಮ್ಮದೇ ಉತ್ಕೃಷ್ಟ ಎಂಬ ಸ್ಪರ್ಧೆ, ಸಮರ ಆರಂಭವಾಗುತ್ತದೆ” ಎಂದಿದ್ದಾರೆ.
ಇದನ್ನೂ ಓದಿ | LGBTQ ಸಮುದಾಯದ ಖಾಸಗಿತನ ಗೌರವಿಸಿ: ಮೋಹನ್ ಭಾಗವತ್