ಗುವಾಹಟಿ: ದೇಶದಲ್ಲಿ ರಾಜಕಾರಣಿಗಳಿಗೂ ವಿವಾದಕ್ಕೂ ಎಲ್ಲಿಲ್ಲದ ನಂಟಿದೆ. ಅದರಲ್ಲೂ, ಕೆಲವು ರಾಜಕಾರಣಿಗಳು, ನಾಯಕರಂತೂ ಬಾಯಿ ತೆರೆದರೆ ಸಾಕು, ವಿವಾದದ ಕಿಡಿ ಹೊತ್ತಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ (Badruddin Ajmal) ಅವರು ಇಂತಹ ವಿವಾದದ ಕಿಡಿ ಹೊತ್ತಿಸಿದ್ದಾರೆ. “ದೇಶದಲ್ಲಿ ಅತ್ಯಾಚಾರ, ದರೋಡೆ, ಕಳ್ಳತನ, ಲೂಟಿ ಮಾಡುವಲ್ಲಿ ಮುಸ್ಲಿಮರೇ ನಂಬರ್ 1 ಇದ್ದಾರೆ” ಎಂದು ಹೇಳಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಅಸ್ಸಾಂನಲ್ಲಿ ಎಐಯುಡಿಎಫ್ ಪ್ರಬಲ ಪಕ್ಷಗಳಲ್ಲಿ ಒಂದಾಗಿದ್ದು, ಈ ಪಕ್ಷದ 15 ಶಾಸಕರಿದ್ದಾರೆ. ಅಸ್ಸಾಂನ ಗೋವಾಲ್‌ಪರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬದ್ರುದ್ದೀನ್ ಅಜ್ಮಲ್, “ಅತ್ಯಾಚಾರ, ಲೂಟಿ, ದರೋಡೆ, ಕಳ್ಳತನದಲ್ಲಿ ನಾವೇ ನಂಬರ್ 1 ಇದ್ದೇವೆ. ನಾವು ಜೈಲಿಗೆ ಹೋಗುವುದರಲ್ಲೂ ನಂಬರ್ 1 ಇದ್ದೇವೆ. ಶಾಲೆ, ಕಾಲೇಜುಗಳಿಗೆ ಹೋಗದ ನಮ್ಮ ಮಕ್ಕಳು ಬೇರೆಯವರಿಗೆ ಮೋಸ ಮಾಡುವುದರಲ್ಲಿ ನಿರತರಾಗಿದ್ದಾರೆ. ಮೋಸ, ವಂಚನೆ ಮಾಡುವವರು ಯಾರು ಎಂದರೆ, ಮುಸ್ಲಿಮರು ಎಂದು ಹೇಳುವ ಪರಿಸ್ಥಿತಿ ಇದೆ” ಎಂದು ಹೇಳಿದ್ದಾರೆ.
@zoo_bear @RanaAyyub @LavanyaBallal The chief of the AIUDF, Badruddin Ajmal, sparked a controversy by saying crime rates were high among Muslims. Ajmal recently said, "We (Muslims) are No.1 in all crimes like robbery, dacoity, rape, loot (sic). We are also No.1 in going to jail".
— N V BALASUBRAMANIAN (@babuset) October 28, 2023
ಬದ್ರುದ್ದೀನ್ ಹೇಳಿಕೆಗೆ ಭಾರಿ ಖಂಡನೆ
ಬದ್ರುದ್ದೀನ್ ಅಜ್ಮಲ್ ಅವರು ಮುಸ್ಲಿಮರು ಕುರಿತು ಹೀಗೆ ಹೇಳಿಕೆ ನೀಡುತ್ತಲೇ ಭಾರಿ ವಿವಾದ ಸೃಷ್ಟಿಯಾಗಿದೆ. ಮುಸ್ಲಿಂ ಸಂಘಟನೆಗಳ ನಾಯಕರು, ಧಾರ್ಮಿಕ ಗುರುಗಳೇ ಬದ್ರುದ್ದೀನ್ ಅಜ್ಮಲ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಮುಸ್ಲಿಮರೇ ಮುಸ್ಲಿಮರ ಕುರಿತು ಇಲ್ಲ-ಸಲ್ಲದ ವಿಚಾರ ಹೇಳುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದೆಲ್ಲ ಬದ್ರುದ್ದೀನ್ ಅಜ್ಮಲ್ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಚರ್ಚೆಯಾಗಿದೆ.
ಇದನ್ನೂ ಓದಿ: Shivamogga Violence : ಎನ್‌ಕೌಂಟರ್ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್ ಎಂದ ಎಸ್ಪಿ
ಹೇಳಿಕೆಗೆ ಬದ್ಧ ಎಂದ ಅಜ್ಮಲ್
ಮುಸ್ಲಿಮರ ಕುರಿತು ಹೇಳಿಕೆ ನೀಡಿದ ಬಳಿಕ ವಿವಾದ ಉಂಟಾದರೂ, “ನನ್ನ ಹೇಳಿಕೆಗೆ ನಾನು ಬದ್ಧ” ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ. “ವಿಶ್ವಾದ್ಯಂತ ಮುಸ್ಲಿಂ ಸಮುದಾಯದವರಲ್ಲಿ ಸಾಕ್ಷರತೆ ಪ್ರಮಾಣ ತುಂಬ ಕಡಿಮೆ ಇದೆ. ನಮ್ಮ ಮಕ್ಕಳು ಶಿಕ್ಷಣ ಪಡೆಯುವುದಿಲ್ಲ. ಉನ್ನತ ಶಿಕ್ಷಣವಂತೂ ಪಡೆಯುವುದೇ ಇಲ್ಲ ಎಂಬುದು ಬೇಸರದ ಸಂಗತಿ. ಕನಿಷ್ಠ 10ನೇ ತರಗತಿ ಪಾಸಾಗದವರೂ ಇದ್ದಾರೆ. ನಮ್ಮ ಸಮುದಾಯದ ಮಕ್ಕಳು ಚೆನ್ನಾಗಿ ಓದಿ, ಎಂಜಿನಿಯರ್ ಅಥವಾ ವೈದ್ಯರಾದರೆ ಸಮುದಾಯವೂ ಏಳಗೆ ಹೊಂದುತ್ತದೆ. ಶಿಕ್ಷಣ ಪಡೆಯದ ಹೊರತು ನಾವು ಏಳಿಗೆ ಹೊಂದಲು ಆಗುವುದಿಲ್ಲ. ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಅಪರಾಧ ಪ್ರಕರಣಗಳ ಕುರಿತು ನಾನು ಮಾತನಾಡಿದ್ದೇನೆ” ಎಂದು ಅಜ್ಮಲ್ ಬದ್ರುದ್ದೀನ್ ಹೇಳಿದ್ದಾರೆ.