Site icon Vistara News

UP Election Result 2023: ಯುಪಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತ ಮುಸ್ಲಿಮರು! ಎಷ್ಟು ಸ್ಥಾನ ಗೆದ್ದರು?

Muslims voted for bjp in UP urban bodies election

ಲಕ್ನೋ, ಉತ್ತರ ಪ್ರದೇಶ: ಇತ್ತೀಚೆಗಷ್ಟೇ ನಡೆದ ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (UP civic polls 2023) ಬಿಜೆಪಿಯ ಸಾಧನೆ ಅತ್ಯುತ್ತಮವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಬಾರಿ ಮುಸ್ಲಿಮರು (Muslim Community) ಭಾರತೀಯ ಜನತಾ ಪಾರ್ಟಿಯ ಪರವಾಗಿ ಮತ ಚಲಾಯಿಸಿದ್ದಾರೆ. ಗಣನೀಯ ಪ್ರಮಾಣದಲ್ಲಿ ಮತಗಳು ಬಾರದೇ ಇದ್ದರೂ, ಪರಿಗಣಿಸಬಹುದಾದ ಮಟ್ಟಿಗೆ ಬಂದಿವೆ. ಸಾಮಾನ್ಯವಾಗಿ ಯುಪಿಯಲ್ಲಿ ಮುಸ್ಲಿಮರು ಸಮಾಜವಾದಿ ಮತ್ತು ಬಹುಜನ ಸಮಾಜ ಪಾರ್ಟಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ, ಈ ಸಮೀಕರಣ ಬದಲಾಗಿದೆ. ಬಿಜೆಪಿಯು ಒಟ್ಟು 395 ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು, ಈ ಪೈಕಿ 61 ಪೈಕಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ(UP Election Result 2023).

ಮೇ 13ರಂದು ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅದ್ಭುತ ಸಾಧನೆ ಮಾಡಿದೆ. ಐದು ನಗರ ಪಾಲಿಕೆ ಪರಿಷತ್ ಚೇರ್ಮನ್, 32 ನಗರ ಪಂಚಾಯತ್ ಚೇರ್ಮನ್, 80 ಕಾರ್ಪೊರೇಟ್ ಮತ್ತು ನಗರ ಪಂಚಾಯತ್ ಹಾಗೂ ನಗರ ಪಾಲಿಕೆಯ 278 ಸದಸ್ಯ ಸ್ಥಾನಗಳಿಗೆ 395 ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ 61 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ನಗರ ಪಾಲಿಕೆ ಪರಿಷತ್ ಚೇರ್ಮನ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ ಯಾವುದೇ ಮುಸ್ಲಿಮ್ ಅಭ್ಯರ್ಥಿ ಆಯ್ಕೆಯಾಗಿಲ್ಲ. ಹೀಗಿದ್ದೂ, ಬಿಜೆಪಿಯು ಐದು ಎನ್‌ಪಿ ಅಧ್ಯಕ್ಷ ಸ್ಥಾನಗಳು, ಇಬ್ಬರು ಕಾರ್ಪೊರೇಟರ್‌ಗಳು (ಲಕ್ನೋ ಮತ್ತು ಗೋರಖ್‌ಪುರದಲ್ಲಿ ತಲಾ ಒಬ್ಬರು), ಮುಸ್ಲಿಮ್ ಪ್ರಾಬಲ್ಯದ ನಗರ ಪಾಲಿಕೆ ಪರಿಷತ್ ಮತ್ತು ನಗರ ಪಂಚಾಯತ್‌ಗಳಿಗೆ ಸ್ಪರ್ದಿಸಿದ 55 ಸದಸ್ಯರನ್ನು ಗೆದ್ದುಕೊಂಡಿದೆ. ಪಕ್ಷೇತರರು ಪ್ರಾಬಲ್ಯ ಹೊಂದಿರುವ ನಗರ ಪಂಚಾಯತ್ ಮತ್ತು ನಗರ ಪಾಲಿಕೆ ಪರಿಷತ್ ಸದಸ್ಯ ಸ್ಥಾನಗಳಲ್ಲಿ ಪಕ್ಷದ ಯಶಸ್ಸಿನ ಪ್ರಮಾಣ ಕ್ರಮವಾಗಿ ಶೇ.25 ಮತ್ತು ಶೇ.19 ದಾಖಲಾಗಿದೆ. ಅಲ್ಲದೇ ಶೇ.15 ಬಿಜೆಪಿಯ ಮುಸ್ಲಿಂ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದು, ಉತ್ತರ ಪ್ರದೇಶದಲ್ಲಿ ಮುಸ್ಲಿಮರು ನಿಧಾನವಾಗಿ ಬಿಜೆಪಿಯತ್ತ ವಾಲುತ್ತಿರುವುದನ್ನು ಸಾಕ್ಷಿಕರಿಸುತ್ತದೆ.

ಭವಿಷ್ಯದಲ್ಲೂ ಮುಸ್ಲಿಮ್ ಮತದಾರರನ್ನು ತನ್ನತ್ತ ಸೆಳೆಯುವ ಕೆಲಸವನ್ನು ಬಿಜೆಪಿಯು ನಿರಂತರವಾಗಿ ಮಾಡಲಿದೆ ಎಂದು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಕುನ್ವರ್ ಬಸ್ತಿ ಅಲಿ ಹೇಳಿದ್ದಾರೆ. ಮುಸ್ಲಿಮ್ ಸಮುದಾಯವು ನಿಧಾನವಾಗಿ ಬಿಜೆಪಿಯ ಬೆಂಬಲಕ್ಕೆ ನಿಲ್ಲುತ್ತಿದೆ. ಮೋದಿ ಹಾಗೂ ಯೋಗಿ ಸರ್ಕಾರ ಜಾರಿಗೆ ತಂದಿರುವ ಅನೇಕ ಯೋಜನೆಗಳ ಲಾಭಗಳು ಮುಸ್ಲಿಮ್‌ರನ್ನು ಸಂತುಷ್ಟಗೊಳಿಸಿವೆ. ಹಾಗಾಗಿಯೇ ಅವರು ಬಿಜೆಪಿಯತ್ತ ವಾಲುತ್ತಿದ್ದಾರೆಂದು ಬಸ್ತಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: UP Municipal Election Result: ಉತ್ತರ ಪ್ರದೇಶ ನಗರ ಪಾಲಿಕೆ ಚುನಾವಣೆ; ಎಲ್ಲ 17 ಪಾಲಿಕೆ ಬಿಜೆಪಿ ಪಾಲಿಗೆ

ಉತ್ತರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅದ್ಭುತ ಪ್ರದರ್ಶನ ತೋರಿಸಿದೆ. ಉತ್ತರ ಪ್ರದೇಶದ ಎಲ್ಲ 17 ಮಹಾನಗರ ಪಾಲಿಕೆ ಮೇಯರ್ ಸ್ಥಾನಗಳನ್ನು ಗೆದ್ದುಕೊಂಡಿದೆ. ಇದೇ ವೇಳೆ, 90 ನಗರ ಪಂಚಾಯ್ತಿಗಳಲ್ಲಿ ಅಧಿಕಾರವನ್ನು ಪಡೆದುಕೊಂಡಿದೆ. ಹಾಗೆಯೇ ಸುಮಾರು 600 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಲಕ್ನೋ, ಪ್ರಯಾಗ್ ರಾಜ್, ವಾರಾಣಸಿ, ಮೀರಠ್, ಸಹಾರಣ್‌ಪುರ, ಅಯೋಧ್ಯೆ, ಕಾನ್ಪುರ್, ಬರೇಲಿ, ಮೊರದಾಬಾದ್, ಆಗ್ರಾ, ಆಲಿಗಢ, ಫಿರೋಜಾಬಾದ್, ಗೋರಖಪುರ, ಘಾಜಿಯಾಬಾದ್, ಝಾನ್ಸಿ, ಮಥುರಾ, ಶಹಜಹಾನಪರು ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version