ನವದೆಹಲಿ: ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಣಕಾಸು, ಪೋಷಕರ ಒತ್ತಡ, ಡಾಕ್ಟರ್, ಎಂಜಿನಿಯರ್, ಯುಪಿಎಸ್‌ಸಿ ಅಧಿಕಾರಿಯಾಗಬೇಕು ಎಂಬ ಒತ್ತಡದ ಮಧ್ಯೆ ವಿದ್ಯಾರ್ಥಿಗಳಿಗೆ ಹೊಸ ಚಿಂತೆ ಶುರುವಾಗಿದೆ. ಇನ್ನು, ನೀಟ್, ಜೆಇಇ, ಐಎಎಸ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ (Delhi) ಯುಪಿಎಸ್‌ಸಿ ಅಭ್ಯರ್ಥಿಯೊಬ್ಬಳು (UPSC Aspirant) ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೌದು, ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿ ವಿದ್ಯಾರ್ಥಿನಿಯೊಬ್ಬಳು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಾರಾಷ್ಟ್ರ ಮೂಲದ 26 ವರ್ಷದ ಅಂಜಲಿ ಜುಲೈ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಡೆತ್‌ನೋಟ್ ಬಹಿರಂಗವಾಗಿದೆ. “ಮಮ್ಮಿ, ಪಪ್ಪಾ, ನನ್ನನ್ನು ಕ್ಷಮಿಸಿ ಬಿಡಿ. ನನಗೆ ನಿಜವಾಗಿಯೂ ಆಗುತ್ತಿಲ್ಲ. ಇಲ್ಲಿ ಬರೀ ಸಮಸ್ಯೆಗಳೇ ಇವೆ, ತೊಂದರೆಗಳೇ ಕಾಡುತ್ತಿವೆ. ಮನಸ್ಸಿಗೆ ಶಾಂತಿ ಎಂಬುದೇ ಇಲ್ಲ. ಖಿನ್ನತೆಯಿಂದ ಹೊರಬರಲು ನಾನು ಎಲ್ಲವನ್ನೂ ಮಾಡಿದೆ. ಆದರೆ ಆಗುತ್ತಿಲ್ಲ, ನನಗೆ ಶಾಂತಿ ಬೇಕು” ಎಂಬುದಾಗಿ ಅಂಜಲಿ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.
“ದೆಹಲಿಯಲ್ಲಿ ಬಾಡಿಗೆ ಜಾಸ್ತಿ ಇದೆ. ನಾನು ಹಲವು ಬಾರಿ ಯುಪಿಎಸ್‌ಸಿ ಬರೆದರೂ ತೇರ್ಗಡೆ ಹೊಂದಲು ಆಗುತ್ತಿಲ್ಲ. ಇದರಿಂದಾಗಿ ನನ್ನ ಮಾನಸಿಕ ನೆಮ್ಮದಿಯು ಹಾಳಾಗಿ ಹೋಗಿದೆ. ನೀವು ನನಗೆ ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತಿರಿ. ಆದರೆ, ನನ್ನನ್ನು ನಾನು ನಿಯಂತ್ರಿಸಿಕೊಳ್ಳಲು ಆಗುತ್ತಿಲ್ಲ. ನಾನು ಮೃತಪಟ್ಟರೆ ಬ್ರೇಕಿಂಗ್ ನ್ಯೂಸ್ ಆಗುತ್ತದೆ ಎಂಬುದು ಗೊತ್ತು. ಆದರೂ, ನಾನು ನನ್ನ ಶಾಂತಿಗಾಗಿ ಇಂತಹ ತೀರ್ಮಾನ ತೆಗೆದುಕೊಂಡಿದ್ದೇನೆ” ಎಂಬುದಾಗಿ ಅಂಜಲಿ ತಿಳಿಸಿದ್ದಾಳೆ.
ಕೋಟಾದಲ್ಲಿ ಇದೇ ವರ್ಷ 14 ವಿದ್ಯಾರ್ಥಿಗಳ ಆತ್ಮಹತ್ಯೆ
ನೀಟ್, ಜೆಇಇ ತೇರ್ಗಡೆಯಾಗದಿರುವುದು, ತೇರ್ಗಡೆಯಾಗದಿರುವ ಭಯ, ಹಲವು ಅನಗತ್ಯ ಒತ್ತಡಗಳಿಂದಾಗಿ ಕೋಟಾದಲ್ಲಿ 2023ರಲ್ಲಿ 26 ವಿದ್ಯಾರ್ಥಿಗಳು ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದಾಗಿ ಕೋಚಿಂಗ್ ಸೆಂಟರ್‌ಗಳು, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಮಾಲೀಕರು ಹಿಂಜರಿಯುವಂತಾಗಿದೆ. ಇನ್ನು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಶಿಕ್ಷಣ ವ್ಯವಸ್ಥೆಯ ಮೇಲೆಯೇ ದೂರುಗಳು ಕೇಳಿಬರುವಂತೆ ಮಾಡಿವೆ. ಪೋಷಕರು ಕೂಡ ಕೋಟಾಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುವಂತಾಗಿದೆ. ಅಂದಹಾಗೆ, 2022ರಲ್ಲಿ ಕೋಟಾದಲ್ಲಿ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಸಕ್ತ ವರ್ಷದಲ್ಲಿ ಇದುವರೆಗೆ 14 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: Self Harming : ಉಕ್ಕಿ ಹರಿಯುವ ಕೃಷ್ಣಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಶರಣು