ನವ ದೆಹಲಿ: ಛತ್ತೀಸ್ಗಢ್ನ ರಾಯ್ಪುರದಲ್ಲಿ ನಡೆದ ಕಾಂಗ್ರೆಸ್ 85ನೇ ಮಹಾ ಅಧಿವೇಶನ (Congress Plenary Session)ದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi), ‘ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ 2004 ಮತ್ತು 2009ರಲ್ಲಿ ಕಾಂಗ್ರೆಸ್ ಗಳಿಸಿದ್ದ ಗೆಲುವು ನನಗೆ ವೈಯಕ್ತಿಕವಾಗಿ ತುಂಬ ತೃಪ್ತಿ ತಂದುಕೊಟ್ಟಿದೆ. ಅದಕ್ಕಿಂತಲೂ ಹೆಚ್ಚಾಗಿ, ಕಾಂಗ್ರೆಸ್ಗೆ ಮಹತ್ವದ ತಿರುವು ಕೊಟ್ಟಿರುವ ಈ ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಕೂಡ ಕೊನೆಯಾಗಬಹುದು. ಹೀಗಾಗುವುದು ಕೂಡ ನನಗೆ ಅತ್ಯಂತ ತೃಪ್ತಿ ತರುವ ಸಂಗತಿಯೇ ಆಗಿದೆ’ ಎಂದು ಹೇಳಿದರು. ಇಲ್ಲಿ ಅವರು ನನ್ನ ಇನ್ನಿಂಗ್ಸ್ ಮುಕ್ತಾಯ ಆಗಬಹುದು ಎನ್ನುವ ಮೂಲಕ ಅವರು ರಾಜಕೀಯ ನಿವೃತ್ತಿಯ ಸುಳಿವು ನೀಡಿದರು.
ಮುಂದುವರಿದ ಮಾತನಾಡಿದ ಅವರು ‘ದೇಶದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ಗಳು ಪ್ರತಿಯೊಂದು ಸಂಸ್ಥೆಗಳನ್ನೂ ಹಿಡಿದಿಟ್ಟುಕೊಂಡು, ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡಿವೆ. ಇದು ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಸವಾಲಿನ ಸಮಯ. ಬಿಜೆಪಿಗರು ಕೆಲವೇ ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟು, ಇಡೀ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Congress Plenary Session: ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಇಂದು ಸೋನಿಯಾ ಗಾಂಧಿ ಭಾಷಣ, ರಾಹುಲ್ ಗಾಂಧಿ ಉಪಸ್ಥಿತಿ
ಅದೇನೇ ಇರಲಿ ಸೋನಿಯಾ ಗಾಂಧಿ ಇತ್ತೀಚೆಗೆ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷರಾದ ನಂತರ ಸಂಪೂರ್ಣ ಅಧಿಕಾರವನ್ನು ಅವರಿಗೇ ನೀಡಲಾಗಿದೆ. ಈಗ ಕಾರ್ಯಕಾರಿ ಸಮಿತಿಯ ಸದಸ್ಯರ ನೇಮಕಾತಿ ಜವಾಬ್ದಾರಿಯೂ ಪೂರ್ಣವಾಗಿ ಮಲ್ಲಿಕಾರ್ಜುನ್ ಖರ್ಗೆ ಅವರದ್ದೇ ಎಂದು ಹೇಳಲಾಗಿದೆ. ಅದರ ಬೆನ್ನಲ್ಲೇ ಸೋನಿಯಾ ಗಾಂಧಿ ಈ ಮಾತುಗಳನ್ನು ಆಡಿದ್ದು ಕುತೂಹಲ ಮೂಡಿಸಿದೆ.