Site icon Vistara News

ನನ್ನ ಜೀವನವೇ ತೆರೆದ ಪುಸ್ತಕ, 140 ಕೋಟಿ ಜನ ನನ್ನ ಕುಟುಂಬ: ಲಾಲುಗೆ ಮೋದಿ ಟಾಂಗ್

Narendra Modi

Jammu Kashmir assembly polls soon, statehood to be restored; Says PM Narendra Modi In Udhampur

ಹೈದರಾಬಾದ್:‌ ನರೇಂದ್ರ ಮೋದಿ ಅವರಿಗೆ ಕುಟುಂಬವಿಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ನೀಡಿದ ಹೇಳಿಕೆಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ತಿರುಗೇಟು ನೀಡಿದ್ದಾರೆ. ತೆಲಂಗಾಣದ (Telangana) ಆದಿಲಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, “ನನ್ನ ಜೀವನವೇ ಒಂದು ತೆರೆದ ಪುಸ್ತಕ ಇದ್ದಹಾಗೆ. ದೇಶದ 140 ಕೋಟಿ ಜನ ನನ್ನ ಕುಟುಂಬಸ್ಥರು” ಎಂದು ಹೇಳುವ ಮೂಲಕ ಟಾಂಗ್‌ ಕೊಟ್ಟಿದ್ದಾರೆ.

“ಇಂಡಿಯಾ ಒಕ್ಕೂಟದ ಪಕ್ಷಗಳ ಪರಿವಾರವಾದ, ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರವನ್ನು ನಾನು ಪ್ರಶ್ನಿಸಿದೆ. ಆದರೆ, ಅವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ, ಅವರು ನನಗೆ ಕುಟುಂಬವೇ ಇಲ್ಲ ಎಂದು ಹೇಳುತ್ತಾರೆ. ಇದರಿಂದ ಪ್ರತಿಪಕ್ಷಗಳಲ್ಲಿ ಎಷ್ಟು ಹತಾಶೆ ಇದೆ ಎಂಬುದು ಗೊತ್ತಾಗುತ್ತದೆ. ಆದರೆ, ನನ್ನ ಜೀವನವೇ ತೆರೆದ ಪುಸ್ತಕದಂತಿದೆ. ದೇಶದ ಪ್ರತಿಯೊಬ್ಬರೂ ನನ್ನ ಕುಟುಂಬದ ಸದಸ್ಯರಿದ್ದಂತೆ” ಎಂದು ನರೇಂದ್ರ ಮೋದಿ ಹೇಳಿದ್ದಾರೆ.

“ದೇಶದ ಕೋಟ್ಯಂತರ ಪುತ್ರಿಯರು, ತಾಯಂದಿರು ಹಾಗೂ ಸಹೋದರಿಯರು ಕೂಡ ಮೋದಿ ಕುಟುಂಬಸ್ಥರಾಗಿದ್ದಾರೆ. ದೇಶದ ಪ್ರತಿಯೊಬ್ಬ ಬಡವನೂ ನನ್ನ ಕುಟುಂಬದ ಸದಸ್ಯನಾಗಿದ್ದಾನೆ. ನಾನು ಅವರ ಕುಟುಂಬದ ಸದಸ್ಯನಾಗಿದ್ದೇನೆ. ನನ್ನ ಕುಟುಂಬಕ್ಕೆ ಅವರೇ ಸದಸ್ಯರಾಗಿದ್ದಾರೆ. ಈಗ ಎಲ್ಲರೂ ನಾನೂ ಮೋದಿ ಪರಿವಾರ ಎಂದು ಹೇಳುತ್ತಿದ್ದಾರೆ” ಎಂದರು. ಲಾಲು ಪ್ರಸಾದ್ ಯಾದವ್‌ ಅವರಿಗೆ ತಿರುಗೇಟು ನೀಡಲು ಬಿಜೆಪಿ ನಾಯಕರು ಅಭಿಯಾನ ಆರಂಭಿಸಿದ್ದು, ಎಕ್ಸ್‌ ಖಾತೆಗಳಲ್ಲಿ ತಮ್ಮ ಹೆಸರಿನ ಮುಂದೆ “ನಾನೂ ಮೋದಿ ಪರಿವಾರ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Narendra Modi : ಲಾಲು ಟೀಕೆಗೆ ಟಾಂಗ್​; ಬಿಜೆಪಿಯಿಂದ ‘ಮೋದಿ ಕಾ ಪರಿವಾರ್’ ಅಭಿಯಾನ

ಲಾಲು ಪ್ರಸಾದ್‌ ಯಾದವ್‌ ಹೇಳಿದ್ದೇನು?

ವಂಶಪಾರಂಪರ್ಯ ರಾಜಕೀಯದ ಬಗ್ಗೆ ಮೋದಿ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಆರ್​​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ನೇರ ದಾಳಿ ನಡೆಸಿದ್ದರು. ಭಾನುವಾರ ನಡೆದ ‘ಜನ ವಿಶ್ವಾಸ್ ಮಹಾ ರ್ಯಾಲಿಯಲ್ಲಿ’ ಮೈತ್ರಿಕೂಟದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರಿಗೆ ತಮ್ಮದೇ ಆದ ಕುಟುಂಬವಿಲ್ಲದಿದ್ದರೆ ನಾವು ಏನು ಮಾಡಲು ಸಾಧ್ಯ? ಅವರು ಸುಮ್ಮನೆ ರಾಮ ಮಂದಿರದ ಹೆಸರು ಹೇಳುತ್ತಲೇ ಓಡಾಡುತ್ತಾರೆ. ವಾಸ್ತವದಲ್ಲಿ ಅವರು ನಿಜವಾದ ಹಿಂದು ಅಲ್ಲ. ಹಿಂದು ಸಂಪ್ರದಾಯದಲ್ಲಿ ಮಗ ತನ್ನ ಹೆತ್ತವರ ಮರಣದ ನಂತರ ತಲೆ ಮತ್ತು ಗಡ್ಡವನ್ನು ಬೋಳಿಸಬೇಕು. ತಾಯಿ ತೀರಿಕೊಂಡಾಗ ಮೋದಿ ಹಾಗೆ ಮಾಡಲಿಲ್ಲ ಎಂದು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version