Site icon Vistara News

ನಾನೇ ಶಾಸಕಾಂಗ ಪಕ್ಷ ನಾಯಕ ಎಂದ ಶಿಂಧೆ, ಉದ್ಧವ್‌ ಠಾಕ್ರೆಗೆ ಸಭೆ ಕರೆಯುವ ಅಧಿಕಾರವಿಲ್ಲ?

ಏಕನಾಥ ಶಿಂಧೆ

ಮುಂಬಯಿ: ಮಹಾರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಅತಿ ಮಹತ್ವದ ಬೆಳವಣಿಗೆಯಲ್ಲಿ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆ ಅವರು ತಾನೇ ಶಾಸಕಾಂಗ ಪಕ್ಷ ನಾಯಕ ಎಂದು ಘೋಷಿಸಿಕೊಂಡಿದ್ದಾರೆ ಮತ್ತು ಹೊಸ ವಿಪ್‌ ಆಗಿ ಭರತ್‌ ಗೋಗಾವಾಲೆ ಅವರನ್ನು ಸಚೇತಕರಾಗಿ ನೇಮಕ ಮಾಡಿದ್ದಾರೆ.
ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಬುಧವಾರ ಸಂಜೆ ಶಿವಸೇನೆಯ ಶಾಸಕಾಂಗ ಪಕ್ಷ ಸಭೆಯನ್ನು ಕರೆದ ಬೆನ್ನಿಗೇ ಏಕನಾಥ ಶಿಂಧೆ ಈ ಹೊಸ ದಾಳವನ್ನು ಉರುಳಿಸಿದ್ದಾರೆ. ಈ ನಡುವೆ, ಐದು ಗಂಟೆಗೆ ನಿಗದಿಯಾಗಿದ್ದ ಶಾಸಕಾಂಗ ಪಕ್ಷ ಸಭೆಯನ್ನು ನಡೆಸುವ ಬದಲು ಫೇಸ್‌ಬುಕ್‌ ಲೈವ್‌ನಲ್ಲಿ ಜನರೊಂದಿಗೆ ಸಂವಾದ ನಡೆಸಲು ಮುಂದಾಗಿದ್ದಾರೆ ಸಿಎಂ ಉದ್ಧವ್‌ ಠಾಕ್ರೆ.

ಏಕನಾಥ ಶಿಂಧೆ ವಾದವೇನು?
೨೦೧೯ರಲ್ಲಿ ಚುನಾವಣೆ ನಡೆದು ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿಯಾದಾಗ ಅವರಿಗೆ ಆಪ್ತರಾಗಿದ್ದ ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಮಂಗಳವಾರ (ಜೂನ್‌ ೨೧) ಏಕನಾಥ ಶಿಂಧೆ ಅವರು ದೊಡ್ಡ ಸಂಖ್ಯೆಯ ಶಾಸಕರರೊಂದಿಗೆ ಬಂಡಾಯವೆದ್ದಾಗ ಅವರಿಗೆ ಪಾಠ ಕಲಿಸಬೇಕು ಎಂಬ ನಿಟ್ಟಿನಲ್ಲಿ ಅವರನ್ನು ಆ ಹುದ್ದೆಯಿಂದ ಕಿತ್ತೆಸೆಯಲಾಗಿತ್ತು.
ಈ ನಡುವೆ, ಮಂಗಳವಾರ ರಾತ್ರಿ ಸೂರತ್‌ನ ಹೋಟೆಲ್‌ನಲ್ಲೇ ಸಭೆಯೊಂದನ್ನು ನಡೆಸಿದ ಶಿವಸೇನೆಯ ೩೪ ಶಾಸಕರು ಏಕನಾಥ ಶಿಂಧೆ ಅವರೇ ಶಾಸಕಾಂಗ ಪಕ್ಷ ನಾಯಕರು ಎಂದು ಘೋಷಿಸಿದರು. ಜತೆಗೆ ಹಾಲಿ ವಿಪ್‌ ಆಗಿರುವ ಸುನಿಲ್‌ ಪ್ರಭು ಅವರು ತಮ್ಮ ಪಾಳಯದಲ್ಲಿ ಇಲ್ಲದೇ ಇರುವುದರಿಂದ ಅವರ ಬದಲಿಗೆ ಭರತ್‌ ಗೋಗಾವಾಲೆ ಅವರನ್ನು ಸಚೇತಕರಾಗಿ ನೇಮಕ ಮಾಡಿದ್ದಾರೆ. ಈ ಅಂಶವನ್ನು ಏಕನಾಥ ಪಾಂಡೇ ಟೀಮ್‌ ಬಹಿರಂಗಪಡಿಸಿರಲಿಲ್ಲ.
ಬುಧವಾರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸಂಜೆ ಐದು ಗಂಟೆಗೆ ಶಾಸಕಾಂಗ ಪಕ್ಷ ಸಭೆ ಕರೆಯಲಾಗಿದೆ. ಎಲ್ಲ ಶಿವಸೇನೆ ಶಾಸಕರು ಭಾಗವಹಿಸಬೇಕು. ಭಾಗವಹಿಸದೆ ಇರುವವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಘೋಷಿಸಿದ್ದರು.

ಆದರೆ, ಕೆಲವೇ ಗಂಟೆಯಲ್ಲಿ ಪ್ರತಿ ಹೇಳಿಕೆ ನೀಡಿದ ಏಕನಾಥ ಶಿಂಧೆ ನಾನೇ ಶಾಸಕಾಂಗ ಪಕ್ಷ ನಾಯಕ ಎಂದು ಘೋಷಿಸಿಕೊಂಡಿದ್ದಾರೆ. ಜತೆಗೆ ಈ ಆಯ್ಕೆಯನ್ನು ಸಮರ್ಥಿಸುವ ಪತ್ರವನ್ನು ರಾಜ್ಯಪಾಲರು, ಉಪಸ್ಪೀಕರ್‌ ಮತ್ತು ವಿಧಾನಸಭೆಯ ಕಾರ್ಯದರ್ಶಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
ಸಂಜೆ ಏಳು ಗಂಟೆಗೆ ಶಿಂಧೆ ಪತ್ರಿಕಾಗೋಷ್ಠಿ ನಡೆಸುವುದಾಗಿ ಪ್ರಕಟಿಸಿದ್ದಾರೆ.

Exit mobile version