Site icon Vistara News

Sharad Pawar: ದಣಿವು ಇಲ್ಲ, ನಿವೃತ್ತಿಯೂ ಆಗಿಲ್ಲ; ವಾಜಪೇಯಿ ಹೇಳಿಕೆ ಉಲ್ಲೇಖಿಸಿ ಅಜಿತ್‌ಗೆ ಶರದ್‌ ಪವಾರ್‌ ಟಾಂಗ್

Sharad Pawar And Ajit Pawar

Ajit Pawar's Faction Named Real NCP In Setback For Sharad Pawar

ಮುಂಬೈ: “ವಯಸ್ಸಾಗಿದೆ, ನಿವೃತ್ತಿ ತೆಗೆದುಕೊಂಡು ವಿಶ್ರಾಂತಿ ಪಡೆಯಿರಿ” ಎಂದು ಹೇಳಿದ ಅಜಿತ್‌ ಪವಾರ್‌ ಅವರಿಗೆ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರು ಟಾಂಗ್‌ ನೀಡಿದ್ದಾರೆ. “ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಅಟಲ್‌ ಬಿಹಾರಿ ವಾಜಪೇಯಿ ಅವರು ಒಂದು ಮಾತು ಹೇಳಿದ್ದರು. ನನಗೆ ದಣಿವಾಗಿಲ್ಲ, ನಾನು ನಿವೃತ್ತಿ ಹೊಂದಿಲ್ಲ (Na tired hu, na retired) ಎಂಬುದಾಗಿ ಹೇಳಿದ್ದರು” ಎಂಬುದಾಗಿ ಮಾರ್ಮಿಕವಾಗಿ ಅಜಿತ್‌ ಪವಾರ್‌ ಅವರಿಗೆ ಶರದ್‌ ಪವಾರ್‌ ತಿರುಗೇಟು ನೀಡಿದರು.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಮೊರಾರ್ಜಿ ದೇಸಾಯಿ ಅವರು ಎಷ್ಟನೇ ವಯಸ್ಸಿಗೆ ಪ್ರಧಾನಿಯಾದರು ಎಂಬುದು ಗೊತ್ತಿದೆಯೇ? ನನಗೆ ಪ್ರಧಾನಿ ಅಥವಾ ಸಚಿವ ಆಗುವ ಮನಸ್ಸಿಲ್ಲ. ಆದರೆ, ಯಾವಾಗಲೂ ಜನರ ಸೇವೆ ಮಾಡಲು ಬಯಸುತ್ತೇನೆ” ಎಂದು ಶರದ್‌ ಪವಾರ್‌ ತಿಳಿಸಿದರು. ಚಿಕ್ಕಪ್ಪ, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರ ಬಣ ತೊರೆದು, ಶಾಸಕರ ಬೆಂಬಲದೊಂದಿಗೆ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸುವ ಮೂಲಕ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈಗ ಎನ್‌ಸಿಪಿ ಚಿಹ್ನೆಗೆ ಶರದ್‌ ಹಾಗೂ ಅಜಿತ್‌ ಪವಾರ್‌ ಮಧ್ಯೆ ಕದನ ಶುರುವಾಗಿದೆ.

ಅಜಿತ್‌ ಪವಾರ್‌ ಹೇಳಿದ್ದೇನು?

ಎನ್‌ಸಿಪಿ ಸಭೆಯಲ್ಲಿ ಮಾತನಾಡಿದ ಅಜಿತ್‌ ಪವಾರ್‌, ಶರದ್‌ ಪವಾರ್‌ ನಿವೃತ್ತಿ ಬಗ್ಗೆ ಮಾತನಾಡಿದ್ದರು. “ಬಿಜೆಪಿ ನಾಯಕರು 75 ವರ್ಷ ವಯಸ್ಸಾಗುತ್ತಲೇ ನಿವೃತ್ತಿ ಹೊಂದುತ್ತಾರೆ. ಎಲ್‌.ಕೆ.ಆಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರೇ ಇದಕ್ಕೆ ನಿದರ್ಶನ. ಇದರಿಂದ ಹೊಸ ಪೀಳಿಗೆಯ ಜನ ರಾಜಕೀಯಕ್ಕೆ ಬರಲು, ಏಳಿಗೆ ಹೊಂದಲು ಕಾರಣವಾಗುತ್ತದೆ. ನಿಮಗೆ ಈಗ 83 ವರ್ಷ ವಯಸ್ಸು. ಈಗಲಾದರೂ ನಿವೃತ್ತಿ ಹೊಂದಿ” ಎಂದು ಅಜಿತ್‌ ಪವಾರ್‌ ಹೇಳಿದ್ದರು.

ಇದನ್ನೂ ಓದಿ: Maharashtra Politics: ‘ಶರದ್‌ ನಿಮ್ಗೆ ವಯಸ್ಸಾಯ್ತು’ ಎಂದ ಅಜಿತ್‌ ಪವಾರ್‌ಗೆ ಸುಪ್ರಿಯಾ ಸುಳೆ ಟಾಂಗ್‌

“ನೀವು ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿ, ಮನೆಯಲ್ಲಿ ವಿಶ್ರಾಂತಿ ಪಡೆಯಿರಿ. ನಮಗೆ ನೀವು ಆಶೀರ್ವಾದ ಮಾಡಿ. ನೀವು ಇನ್ನಷ್ಟು ದಿನ ಆರೋಗ್ಯದಿಂದ ಇರಬೇಕು ಎಂಬುದಾಗಿ ಪ್ರಾರ್ಥಿಸುತ್ತೇನೆ. ನೀವು ಎಲ್ಲರ ಮುಂದೆ ನನ್ನನ್ನು ಖಳನಾಯಕನಂತೆ ಬಿಂಬಿಸಿದಿರಿ. ಆದರೂ ನಾನು ನಿಮ್ಮ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ” ಎಂದು ಪಕ್ಷದ ಸಭೆಯಲ್ಲಿ ಅಜಿತ್‌ ಪವಾರ್‌ ತಿಳಿಸಿದ್ದರು.

Exit mobile version