ಲಖನೌ: ಕೇವಲ ನಾಲ್ಕು ದಿನದ ಹಿಂದಷ್ಟೇ ಉತ್ತರ ಪ್ರದೇಶದ ಲಖನೌನಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಂಡ ಪ್ರತಿಷ್ಠಿತ ಲುಲು ಮಾಲ್ ವಿವಾದಕ್ಕೆ ಗುರಿಯಾಗಿದೆ. ೨೦೦೦ ಕೋಟಿ ರೂ. ವೆಚ್ಚದೊಂದಿಗೆ ನಿರ್ಮಾಣಗೊಂಡು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಲೋಕಾರ್ಪಣೆಗೊಂಡ ಈ ಮಾಲ್‌ನಲ್ಲಿ ನಮಾಜ್ ಮಾಡಲು ಅವಕಾಶ ನೀಡಿರುವುದೇ ವಿವಾದಕ್ಕೆ ಕಾರಣ.
ಮಾಲ್‌ನ ಶಾಪಿಂಗ್ ಪ್ರದೇಶದಲ್ಲಿ ನಮಾಜ್ ಮಾಡಿರುವ ವಿಡಿಯೊವೊಂದು ಬಿಡುಗಡೆಗೊಂಡಿದ್ದು, ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ಜುಲೈ ೧೨ರಂದು ಈ ವಿದ್ಯಮಾನ ನಡೆದಿದೆ ಎನ್ನಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಸಾರ್ವಜನಿಕ ಜಾಗದಲ್ಲಿ ನಮಾಜ್ ಮಾಡಿರುವುದನ್ನು ಆಕ್ಷೇಪಿಸಿದೆ ಮತ್ತು ಹಿಂದೂಗಳು ಈ ಮಾಲ್‌ನ್ನು ಬಹಿಷ್ಕರಿಸಬೇಕು ಎಂದು ಕೇಳಿಕೊಂಡಿದೆ. ಜತೆಗೆ ತಮಗೆ ಸುಂದರ ಕಾಂಡ ಪಠಿಸಲು ಅವಕಾಶ ನೀಡಬೇಕು ಎಂದು ಕೋರಿದೆ.
ʻʻಲುಲು ಮಾಲ್‌ನಲ್ಲಿ ಕೆಲವರು ನೆಲದ ಮೇಲೆ ಕುಳಿತು ನಮಾಜ್ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕ ಜಾಗದಲ್ಲಿ ನಮಾಜ್‌ಗೆ ಅವಕಾಶ ನೀಡಬಾರದು ಎಂಬ ಉತ್ತರ ಪ್ರದೇಶ ಸರಕಾರದ ಆದೇಶವನ್ನು ಧಿಕ್ಕರಿಸಿದಂತಾಗಿದೆʼʼ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ವಕ್ತಾರರಾದ ಶಿಶಿರ್ ಚತುರ್ವೇದಿ ಹೇಳಿದ್ದಾರೆ. ಮುಖ್ಯಮಂತ್ರಿ ಆದಿತ್ಯನಾಥ್ ಸಿಂಗ್ ಅವರು ವಿಚಾರವನ್ನು ಗಮನಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹಿಂದೂ ಸಂಘಟನೆಗಳು ಲಖನೌ ಪೊಲೀಸರಿಗೆ ಈ ಬಗ್ಗೆ ಲಿಖಿತ ದೂರನ್ನು ಕೂಡಾ ನೀಡಿವೆ.
ಎಲ್ಲಿದೆ ಈ ಮಾಲ್?
ಲಖನೌನ ಗಾಲ್ಫ್ ಸಿಟಿಯಲ್ಲಿರುವ ಅಮರ್ ಶಹೀದ್ ಪಾತ್‌ನಲ್ಲಿ ಈ ಮಾಲ್ ಇದೆ. ಇದರಲ್ಲಿ ದೇಶದ ಅತಿ ದೊಡ್ಡ ಬ್ರಾಂಡ್‌ಗಳ ಮಳಿಗೆಗಳಿವೆ. ಸುಮಾರು ೨೨ ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಮಾಲ್ ನಿರ್ಮಾಣವಾಗಿದ್ದು, ೨೦೦೦ ಕೋಟಿ ರೂ. ವೆಚ್ಚವಾಗಿದೆ. ೧೧ ಸ್ಕ್ರೀನ್‌ಗಳ ಪಿವಿಆರ್ ಸೂಪರ್‌ಫ್ಲೆಕ್ಸ್ ಈ ವರ್ಷದ ಅಂತ್ಯದಲ್ಲಿ ಉದ್ಘಾಟನೆಗೊಳ್ಳಲಿದೆ. ಇಲ್ಲಿನ ಪಾರ್ಕಿಂಗ್ ಏರಿಯಾದಲ್ಲಿ ೩೦೦೦ ವಾಹನಗಳನ್ನು ನಿಲ್ಲಿಸಬಹುದು.
ಬಹು ವರ್ಷದ ಹಿಂದೆ ಕೊಚ್ಚಿಯಲ್ಲಿ ನಿರ್ಮಾಣಗೊಂಡ ಯೂಸುಫ್ ಅಲಿ ಮಾಲೀಕತ್ವದ ಈ ಮಾಲ್ ಇದೀಗ ಬೆಂಗಳೂರು, ತಿರುವನಂತಪುರ, ತ್ರಿಶೂರ್ ಮತ್ತು ಲಖನೌದಲ್ಲೂ ಬೃಹತ್ ಮಳಿಗೆಗಳನ್ನು ಹೊಂದಿದೆ.
ಇದನ್ನೂ ಓದಿ| ದಾವೋಸ್‌ನಲ್ಲಿ ಸಿಎಂ, ರಾಜ್ಯದಲ್ಲಿ 2,000 ಕೋಟಿ ರೂ. ಹೂಡಿಕೆಗೆ ಲುಲು ಗ್ರೂಪ್ ಒಪ್ಪಂದ