Site icon Vistara News

Cheetah Died: ನಮೀಬಿಯಾದಿಂದ ಬಂದ 8 ಚೀತಾಗಳ ಪೈಕಿ ಹೆಣ್ಣು ಚೀತಾ ಸಾಶಾ ಸಾವು, ಕಾರಣವೇನು?

Cheetah

ಶಿವಪುರಿ, ಮಧ್ಯಪ್ರದೇಶ: ನಮೀಬಿಯಾದಿಂದ ಭಾರತಕ್ಕೆ ತರಲಾದ 8 ಚೀತಾಗಳ(Cheetah Died) ಪೈಕಿ ಒಂದು ಹೆಣ್ಣು ಚೀತಾ ಸೋಮವಾರ ಮೃತಪಟ್ಟಿದೆ. ಮೃತ ಚೀತಾ ಸಾಶಾಗೆ (Sasha) ಕಳೆದ ಜನವರಿಯಿಂದ ಕಿಡ್ನಿ ಸೋಂಕಿನಿಂದ ಬಳಲುತ್ತಿತ್ತು. ಅಂದಿನಿಂದಲೂ ಈ ಚೀತಾವನ್ನು ತೀವ್ರ ವೈದ್ಯಕೀಯ ನಿಗಾದಲ್ಲಿಡಲಾಗಿತ್ತು. ಅಂತಿಮವಾಗಿ ಚೀತಾ ಸೋಮವಾರ ಕೊನೆಯುಸಿರೆಳೆದಿದೆ. ಉಳಿದ ಚೀತಾಗಳು ಆರೋಗ್ಯವಾಗಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಚೀತಾ ಸಂತತಿ ಅವಸಾನ ಕಂಡಿದ್ದವು. ಭಾರತದಲ್ಲಿ ಮತ್ತೆ ಚೀತಾ ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು ಚೀತಾ ಮರುಪರಿಚಯ ಕಾರ್ಯಕ್ರಮವನ್ನು ರೂಪಿಸಿತ್ತು. ಅದರನ್ವಯ ಕಳೆದ ವರ್ಷದ ನಮೀಬಿಯಾದಿಂದ ಒಟ್ಟು 8 ಚೀತಾಗಳನ್ನು ತಂದು ಮಧ್ಯ ಪ್ರದೇಶ ಕುನೊ ನ್ಯಾಷನಲ್ ಪಾರ್ಕ್‌ನಲ್ಲಿ ಬಿಡಲಾಗಿತ್ತು. ಈಗ ಮೃತಪಟ್ಟಿರುವ ಸಾಶಾ, ಐದು ಹೆಣ್ಣು ಚಿರತೆಗಳ ಪೈಕಿ ಒಂದಾಗಿದೆ. ಭಾರತಕ್ಕೆ ಮತ್ತೆ ಚೀತಾಗಳನ್ನು ಪರಿಚಯಿಸುವ ಕಾರ್ಯಕ್ರಮವು ಭಾರೀ ಸುದ್ದಿಯಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೆಮ್ಮೆ ಪಟ್ಟಿದ್ದರು. ಏತನ್ಮಧ್ಯೆ, ನಮೀಬಿಯಾದಿಂದ ತರಲಾಗಿರುವ ಚೀತಾಗಳು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು.

ಮತ್ತೆರಡು ಚೀತಾ ಕಾಡಿಗೆ ಬಿಡುಗಡೆ

ಕಳೆದ ವಾರ ಇನ್ನೂ ಎರಡು ಚೀತಾಗಳಾದ ಎಲ್ಟನ್ ಮತ್ತು ಫ್ರೆಡ್ಡಿಯನ್ನು ಮಧ್ಯಪ್ರದೇಶದ ಕಾಡಿಗೆ ಬಿಡಲಾಗಿತ್ತು. ಅದರೊಂದಿಗೆ, ನಮೀಬಿಯಾದಿಂದ ತರಲಾದ ಎಂಟು ಚಿರತೆಗಳ ಪೈಕಿ ನಾಲ್ಕನ್ನು ಶಿಯೋಪುರ್ ಜಿಲ್ಲೆಯ ಉದ್ಯಾನವನದಲ್ಲಿ ಕಾಡಿಗೆ ಬಿಡಲಾಗಿದೆ.

ಒಟ್ಟು ಎಂಟು ನಮೀಬಿಯನ್ ಚೀತಾಗಳನ್ನು ತರಲಾಗಿತ್ತು. ಈ ಪೈಕಿ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳಿದ್ದವು. ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಮರುಪರಿಚಯ ಕಾರ್ಯಕ್ರಮದ ಭಾಗವಾಗಿ ಚೀತಾಗಳನ್ನು ತರಲಾಗಿತ್ತು. ಮೊದಲಿಗೆ ಅವುಗಳನ್ನು ಪಾರ್ಕ್‌ನ ಬಾರಿಗೆ ಕ್ವಾರಂಟೈನ್ ಬೊಮಾಸ್ (ಪ್ರಾಣಿ ಆವರಣಗಳು)ನಲ್ಲಿ ಇರಿಸಲಾಗಿತ್ತು. ನಂತರ ಅವುಗಳನ್ನು ಕಾಡಿಗೆ ಬಿಡಲಾಗಿತ್ತು.

ಇದನ್ನೂ ಓದಿ: Cheetahs From South Africa: ದಕ್ಷಿಣ ಆಫ್ರಿಕಾದಿಂದ 10 ತಾಸು ಪ್ರಯಾಣ ಮಾಡಿ ಭಾರತ ತಲುಪಿದ 12 ಚೀತಾಗಳು

ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದಲೂ 12 ಚೀತಾಗಳನ್ನು ತಂದು ಕಾಡಿಗೆ ಬಿಡಲಾಗಿದೆ. ಈ ಪೈಕಿ 7 ಗಂಡು ಹಾಗೂ ಐದು ಹೆಣ್ಣು ಚೀತಾಗಳಿವೆ. ಕುನೋ ನ್ಯಾಷನಲ್ ಪಾರ್ಕ್‌ನಲ್ಲಿ ಈಗ ಒಟ್ಟು 20 ಚೀತಾಗಳಿವೆ. ಮುಂದಿನ ದಶಕದಲ್ಲಿ ಇನ್ನಷ್ಟು ಚೀತಾಗಳನ್ನು ಭಾರತಕ್ಕೆ ನೀಡುವ ಸಂಬಂಧ ದಕ್ಷಿಣ ಆಫ್ರಿಕಾ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Exit mobile version