Site icon Vistara News

Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

Narayana Murthy

Narayana Murthy reacts to being asked how AI will hurt job prospects

ಬೆಂಗಳೂರು: ಆಧುನಿಕ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನವು ಪ್ರಬಲವಾಗುತ್ತಿದೆ. ಅದರಲ್ಲೂ, ಪ್ರಬಂಧ ಬರೆಯುವುದರಿಂದ ಹಿಡಿದು ಕೋಡ್‌ ರಚನೆವರೆಗೆ ಎಐ ಆಧಾರಿತ ಚಾಟ್‌ಬಾಟ್‌ಗಳು (ಚಾಟ್‌ಜಿಪಿಟಿ) ಮನುಷ್ಯನ ಉದ್ಯೋಗಕ್ಕೇ ಕತ್ತರಿ ಹಾಕುತ್ತವೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಕಡಿತದ ಕುರಿತು ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ಕೃತಕ ಬುದ್ಧಿಮತ್ತೆಯಿಂದ ಜನರ ಉದ್ಯೋಗಗಳಿಗೆ ಕತ್ತರಿ ಬೀಳುವುದಿಲ್ಲ” ಎಂದಿದ್ದಾರೆ.

“ಜಗತ್ತಿನಲ್ಲಿ ದೇವರ ಅದ್ಭುತ ಸೃಷ್ಟಿ ಎಂದರೆ ಅದು ಮನುಷ್ಯನ ಮೆದುಳು, ಬುದ್ಧಿಶಕ್ತಿ. 1975ರಲ್ಲೂ ತಂತ್ರಜ್ಞಾನದಲ್ಲಿ ಬದಲಾವಣೆಗಳು ಆದಾಗ ಜನರ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ. ಸಾಫ್ಟ್‌ವೇರ್‌ ಡೆವಲೆಪ್‌ಮೆಂಟ್‌ ಶುರುವಾದಾಗ ಇದು ಮನುಷ್ಯನನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಕಾಲಾನಂತರದಲ್ಲಿ ಜನರ ಉದ್ಯೋಗಗಳು ಜಾಸ್ತಿಯಾದವೇ ಹೊರತು, ಉದ್ಯೋಗಗಳ ಕೊರತೆ, ಕುಂಠಿತ ಆಗಲಿಲ್ಲ. ಹಾಗಾಗಿ, ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳ ಕಡಿತವಾಗುವುದಿಲ್ಲ. ಅದರಲ್ಲೂ, ಭಾರತವು ತಂತ್ರಜ್ಞಾನದ ಅಳವಡಿಕೆಯಲ್ಲಿ ಒಂದು ಹೆಜ್ಜೆ ಮುಂದಿದೆ. ಭಾರತೀಯರ ಎದುರು ಹಲವು ಸಾಧ್ಯತೆಗಳು ಇವೆ” ಎಂದು ಮನಿ ಕಂಟ್ರೋಲ್‌ಗೆ ನೀಡಿದ ಸಂದರ್ಶನದ ವೇಳೆ ಪ್ರಸ್ತಾಪಿಸಿದ್ದಾರೆ.

“ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅವಶ್ಯಕತೆ, ಆಧುನಿಕ ಜಗತ್ತಿನಲ್ಲಿ ಅದರ ಬಳಕೆಯ ವ್ಯಾಪ್ತಿಯನ್ನು ನಾನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಇದು ಮನುಷ್ಯನ ಕೆಲಸಕ್ಕೆ ಪರ್ಯಾಯವಾಗುವುದಿಲ್ಲ. ಮನುಷ್ಯನ ಕೆಲಸದ ಬದಲಾಗಿ ಇದೇ ಕೆಲಸ ಮಾಡುವುದಿಲ್ಲ. ಮನುಷ್ಯನ ಮೆದುಳಿಗೆ ಸಮನಾಗಿ ಕೆಲಸ ಮಾಡುವ ತಂತ್ರಜ್ಞಾನ ಇದುವರೆಗೆ ಬಂದಿಲ್ಲ. ತಂತ್ರಜ್ಞಾನವು ಮನುಷ್ಯನ ಕೆಲಸವನ್ನು ಸುಲಭಗೊಳಿಸುವ ಸಾಧನವಾಗಿದೆ ಅಷ್ಟೆ. ಇದರಿಂದ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ ಎಂದು ನನಗೆ ಅನಿಸುವುದಿಲ್ಲ” ಎಂದರು.

ಭಾರತದ ಆರ್ಥಿಕತೆಯು ಪ್ರಪಂಚದ ಹಲವು ರಾಷ್ಟ್ರಗಳೊಂದಿಗೆ ಸ್ಪರ್ಧಿಸಬೇಕಾದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಎನ್.ಆರ್.ನಾರಾಯಣ ಮೂರ್ತಿ ಅವರು ಕೆಲ ತಿಂಗಳ ಹಿಂದೆ ಹೇಳಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. “ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತದ ಯುವಕರು ಹೆಚ್ಚುವರಿ ಗಂಟೆಗಳ ಕೆಲಸವನ್ನು ಮಾಡಬೇಕಾಗುತ್ತದೆ. ಎರಡನೇ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿ ಯುವಕರು ಇದೇ ರೀತಿ ಮಾಡಿದ್ದರು” ಎಂದಿದ್ದರು. ಇದರ ಕುರಿತು ಪರ-ವಿರೋಧಗಳ ಚರ್ಚೆಯಾಗಿತ್ತು.

ಇದನ್ನೂ ಓದಿ: Narayana Murthy : 4.2 ಕೋಟಿ ರೂಪಾಯಿ ಡಿವಿಡೆಂಡ್​ ಜೇಬಿಗಿಳಿಸಿದ ನಾರಾಯಣ ಮೂರ್ತಿಯ 5 ತಿಂಗಳ ಮೊಮ್ಮಗ!

Exit mobile version