ಮೊಘಲರು ನೆಲಸಮಗೊಳಿಸಿದ್ದಾರೆ ಎನ್ನಲಾದ ಪುಣೆಯ ನಾರಾಯಣೇಶ್ವರ ದೇವಸ್ಥಾನ (Narayneshwar Temple)ದ ಅವಶೇಷಗಳು ಅಲ್ಲಿನ ಬಡಿ ಶೇಖ್ ದರ್ಗಾದ ಹಿಂಭಾಗದಲ್ಲಿ ಪತ್ತೆಯಾಗಿವೆ. ಪುಣೆ ಮುನ್ಸಿಪಲ್ ಕಾರ್ಪೋರೇಶನ್ನ ಪೌರಕಾರ್ಮಿಕರು ಆ ಪ್ರದೇಶದಲ್ಲಿ ಸ್ವಚ್ಛಗೊಳಿಸುತ್ತಿದ್ದಾಗ ದೇಗುಲದ ಅವಶೇಷ ಸಿಕ್ಕಿದೆ ಎನ್ನಲಾಗಿದೆ. ಈ ದರ್ಗಾ ಒಂದು ನದಿ ದಡದ ಮೇಲೆ ಇದೆ. ಇದೀಗ ಸಿಕ್ಕ ಅವಶೇಷಗಳ ಮಧ್ಯೆ ಒಂದು ಸಮಾಧಿಯೂ ಸಿಕ್ಕಿದ್ದು, ಅದರ ಮೇಲೆ ಓಂ ಸಂಕೇತವಿದೆ. ಹಾಗೇ, 1700 ಮತ್ತು 1800 ಎಂದು ಬರೆದುಕೊಂಡಿದೆ. ಇದು ಬಹುಶಃ ಕ್ರಿಸ್ತಶಕದ ಅಂಕಿ ಇರಬಹುದು ಎಂದು ಹೇಳಲಾಗಿದೆ.
ಕಳೆದ ವರ್ಷ ಕಾಶಿ ವಿಶ್ವನಾಥ ದೇಗುಲ ಮತ್ತು ಗ್ಯಾನವಾಪಿ ಮಸೀದಿ ಪ್ರಕರಣ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಮಹಾರಾಷ್ಟ್ರದ ಕೆಲವು ಹಿಂದುಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಪುಣೆಯಲ್ಲಿ ಇದ್ದ ಹಿಂದು ದೇವಸ್ಥಾನಗಳ ಬಗ್ಗೆ ಧ್ವನಿ ಎತ್ತಿದ್ದವು. ಪುಣೆಯಲ್ಲಿ ನಾಗೇಶ್ವರ್, ಪುಣ್ಯೇಶ್ವರ ಮತ್ತು ನಾರಾಯಣೇಶ್ವರ ಎಂಬ ಮೂರು ದೇವಸ್ಥಾನಗಳು ಇದ್ದವು. ಅವುಗಳಲ್ಲಿ ಪುಣೇಶ್ವರ, ನಾರಾಯಣೇಶ್ವರ ದೇವಸ್ಥಾನಗಳನ್ನು ಮೊಘಲರ ಆಳ್ವಿಕೆ ವೇಳೆ ನೆಲಸಮ ಮಾಡಿ, ಆ ಜಾಗದಲ್ಲಿ ದರ್ಗಾಗಳನ್ನು ನಿರ್ಮಿಸಲಾಗಿದೆ. ನಾಗೇಶ್ವರ ದೇಗುಲವನ್ನು ಮಾತ್ರ ಉಳಿಸಲಾಗಿದೆ. ಈ ಬಗ್ಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದ್ದವು. ಅಷ್ಟೇ ಅಲ್ಲ, ಪುಣ್ಯೇಶ್ವರ ದೇಗುಲವಿದ್ದಲ್ಲಿ ಚೋಟಿ ಮತ್ತು ನಾರಾಯಣೇಶ್ವರ ದೇವಸ್ಥಾನವಿದ್ದಲ್ಲಿ ಬಡಿ ಶೇಖ್ ದರ್ಗಾಗಳನ್ನು ನಿರ್ಮಿಸಲಾಗಿದೆ ಎಂದು ಹಲವು ಇತಿಹಾಸಕಾರರು, ಹಿಂದು ಮುಖಂಡರು ಪ್ರತಿಪಾದಿಸುತ್ತಿದ್ದಾರೆ.
ಇದನ್ನೂ ಓದಿ: ರಾಮ ನವಮಿ ಮುನ್ನಾದಿನ ರಾತ್ರಿ ಮಹಾರಾಷ್ಟ್ರದ ಶ್ರೀರಾಮ ದೇಗುಲದ ಹೊರಗೆ ಗುಂಪು ಘರ್ಷಣೆ; ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ
ಅದರಲ್ಲೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS)ಯಂತೂ ಅಭಿಯಾನವನ್ನೇ ಶುರು ಮಾಡಿದೆ. ನಾರಾಯಣೇಶ್ವರ ಮತ್ತು ಪುಣ್ಯೇಶ್ವರ ದೇಗುಲ ಮತ್ತೆ ನಿರ್ಮಾಣವಾಗಬೇಕು ಎಂದು ಎಂಎನ್ಎಸ್ ನಾಯಕರು ಆಗ್ರಹಿಸುತ್ತಲೇ ಇದ್ದಾರೆ. ಅದರ ಮಧ್ಯೆ ಈಗ ನಾರಾಯಣೇಶ್ವರ ದೇಗುಲದ ಅವಶೇಷಗಳು ಪತ್ತೆಯಾಗಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.