Site icon Vistara News

Narco-Terrorism: ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ಆರು ಸರ್ಕಾರಿ ಅಧಿಕಾರಿಗಳ ವಜಾ

Narco-Terrorism

ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಮಾದಕ ವಸ್ತು ಮಾರಾಟದ ಮೂಲಕ ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಆರೋಪದ ಮೇಲೆ ಐವರು ಪೊಲೀಸರು ಕಾನ್ಸ್‌ಟೇಬಲ್‌ ಸೇರಿದಂತೆ ಆರು ಸರ್ಕಾರಿ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಈ ಅಧಿಕಾರಿಗಳು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (Inter-Services Intelligence) ಮತ್ತು ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಭಯೋತ್ಪಾದಕ ಗುಂಪುಗಳ ಜಾಲದ ಭಾಗವಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ (Narco-Terrorism).

ಈ ಜಾಲವು ಮಾದಕ ವಸ್ತುಗಳ ಮಾರಾಟಕ್ಕೆ ನೆರವಾಗಿದೆ. ಅದರಿಂದ ಬಂದ ಲಾಭವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ವಿನಿಯೋಗಿಸಲಾಗಿದೆ. “ಐವರು ಪೊಲೀಸರು ಮತ್ತು ಒಬ್ಬ ಶಿಕ್ಷಕ ಸೇರಿದಂತೆ ಆರು ಸರ್ಕಾರಿ ಅಧಿಕಾರಿಗಳು ಮಾದಕ ವಸ್ತು ಮಾರಾಟದ ಮೂಲಕ ಭಯೋತ್ಪಾದಕರಿಗೆ ಹಣಕಾಸು ಒದಗಿಸುವಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂವಿಧಾನದ 311 (2) (ಸಿ) ಸೆಕ್ಷನ್‌ ಪ್ರಕಾರ ತಕ್ಷಣವೇ ಜಾರಿಗೆ ಬರುವಂತೆ ಆರು ಮಂದಿಯನ್ನು ಅಮಾನತುಗೊಳಿಸಿದರು. ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ವಿಚಾರಣೆಯಿಲ್ಲದೆ ನೌಕರರನ್ನು ವಜಾಗೊಳಿಸುವ ಅಧಿಕಾರವನ್ನು ಈ ಸೆಕ್ಷನ್‌ ಸರ್ಕಾರಕ್ಕೆ ನೀಡುತ್ತದೆ. ಇದರೊಂದಿಗೆ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಆಡಳಿತವು 70 ಸರ್ಕಾರಿ ನೌಕರರನ್ನು ವಜಾ ಮಾಡಿದಂತಾಗಿದೆ. ಮಾದಕ ವಸ್ತು ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಕಳೆದ ತಿಂಗಳು ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ವಜಾಗೊಳಿಸಲಾಗಿತ್ತು.

ವಜಾಗೊಂಡ 6 ಅಧಿಕಾರಿಗಳು

ಫಾರೂಕ್ ಅಹ್ಮದ್ ಶೇಖ್ (ಕಾನ್ಸ್‌ಟೇಬಲ್‌): 2000ನೇ ಇಸವಿಯಲ್ಲಿ ನೇಮಕಗೊಂಡ ಈತ ಕುಪ್ವಾರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರದ ನಗರ ಪ್ರದೇಶಗಳಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿದ ತಂಡದಲ್ಲಿ ಸಕ್ರಿಯನಾಗಿದ್ದ. 454 ಗ್ರಾಂ ಬ್ರೌನ್ ಶುಗರ್‌ನೊಂದಿಗೆ ಈತನನ್ನು ಬಂಧಿಸಲಾಗಿದೆ.

ಖಾಲಿದ್ ಹುಸೇನ್ ಶಾ (ಕಾನ್ಸ್‌ಟೇಬಲ್‌): 2009ರಲ್ಲಿ ನೇಮಕಗೊಂಡ ಈತ ಶ್ರೀನಗರದ ಕುಪ್ವಾರಾ ಮತ್ತು ಕಾಶ್ಮೀರದ ಕೌಂಟರ್ ಇಂಟೆಲಿಜೆನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ. 557 ಗ್ರಾಂ ಬ್ರೌನ್ ಶುಗರ್‌ನೊಂದಿಗೆ ಸಿಕ್ಕಿ ಬಿದ್ದಿದ್ದಾನೆ.

ರಹಮತ್ ಶಾ (ಕಾನ್ಸ್‌ಟೇಬಲ್‌): ಕುಪ್ವಾರಾದಲ್ಲಿ ಸೇವೆ ಕರ್ತವ್ಯ ನಿರ್ವಹಿಸುತ್ತಿದ್ದ ಈತನಿಗೆ ಮೊದಲಿನಿಂದಲೂ ಡ್ರಗ್ ಪೆಡ್ಲರ್‌ಗಳ ಪರಿಚಯವಿತ್ತು. 806 ಗ್ರಾಂ ಬ್ರೌನ್ ಶುಗರ್‌ನೊಂದಿಗೆ ಬಲೆಗೆ ಬಿದ್ದಿದ್ದಾನೆ.

ಇರ್ಷಾದ್ ಅಹ್ಮದ್ ಚಾಲ್ಕೂ (ಕಾನ್ಸ್‌ಟೇಬಲ್‌): 2009ರಲ್ಲಿ ನೇಮಕಗೊಂಡ ಈತ ಬಾರಾಮುಲ್ಲಾದ ಅನಂತ್ ನಾಗ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ. ಲಷ್ಕರ್-ಎ-ತೊಯ್ಬಾದ ಓವರ್ ಗ್ರೌಂಡ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ. ಸೆರೆ ಸಿಕ್ಕ ವೇಳೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡು ಹೊಂದಿದ್ದ.

ಸೈಫ್ ದಿನ್ (ಕಾನ್ಸ್‌ಟೇಬಲ್‌): 1995ರಲ್ಲಿ ನೇಮಕಗೊಂಡ ಇವನು ಜಮ್ಮು ಮತ್ತು ಕಾಶ್ಮೀರ ಸಶಸ್ತ್ರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ. ಕುಖ್ಯಾತ ಡ್ರಗ್ ಪೆಡ್ಲರ್, ಹಿಜ್ಬುಲ್ ಮುಜಾಹಿದ್ದೀನ್ ಜತೆ ನಂಟು ಹೊಂದಿದ್ದ ಈತನನ್ನು ಹವಾಲಾ ಹಣ ವರ್ಗಾವಣೆಯ ಪುರಾವೆಗಳೊಂದಿಗೆ ಬಂಧಿಸಲಾಗಿದೆ.

ನಜಮ್ ದಿನ್ (ಶಿಕ್ಷಕ): 2014ರಿಂದ ಈತ ಪೂಂಛ್‌ನಲ್ಲಿ ಶಿಕ್ಷಕನಾಗಿದ್ದ. ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಿಜ್ಬುಲ್ ಮುಜಾಹಿದ್ದೀನ್ ಒಜಿಡಬ್ಲ್ಯು ಸಂಘಟನೆಯಿಂದ ಹಣ ಪಡೆದಿದ್ದ. 5 ಕೆಜಿ ಹೆರಾಯಿನ್‌ನೊಂದಿಗೆ ಈತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲು: ಪಿಒಕೆಯಲ್ಲಿ ಸಮವಸ್ತ್ರದ ಬದಲು ಪಠಾಣಿ ಸೂಟ್ ಧರಿಸಿ ಬೇಹುಗಾರಿಕೆಗೆ ಮುಂದಾದ ಪಾಕ್‌ ಸೇನೆ

Exit mobile version