ಶ್ರೀನಗರ: ಹಲವು ದಶಕಗಳಿಂದ ಗುಂಡಿನ ಮೊರೆತಕ್ಕೆ ನಲುಗಿರುವ ಜಮ್ಮು ಮತ್ತು ಕಾಶ್ಮೀರ, ಕಳೆದ ಆರೆಂಟು ವರ್ಷಗಳಿಂದ ಹೊಸ ಬಗೆಯ ಸಂಕಷ್ಟವನ್ನೂ ಎದುರಿಸುತ್ತಿದೆ. ಗಡಿಯಲ್ಲಿ ನುಸುಳುವುದರ ಜೊತೆಗೆ, ಪರೋಕ್ಷ ಭಯೋತ್ಪಾದನೆಯ ಮಾರ್ಗವಾಗಿ, ಮುಗ್ಧ ಜನರನ್ನು ಮಾದಕವಸ್ತುಗಳ ಜಾಲಕ್ಕೆ ಬೀಳಿಸುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ.ಮಾದಕದ್ರವ್ಯ ವ್ಯಸನಿಗಳ ಅಂಕಿ-ಅಂಶಗಳನ್ನು ಗಮನಿಸಿದರೆ, 2016ರಲ್ಲಿ ಅಲ್ಲಿನ ಪುನರ್ವಸತಿ ಕೇಂದ್ರಗಳಲ್ಲಿ ಸುಮಾರು 489 ಜನರು ಭರ್ತಿಯಾಗಿದ್ದರೆ, 2021ರಲ್ಲಿ ಈ ಪ್ರಮಾಣ ಶೇ. 2000ದಷ್ಟು ಹೆಚ್ಚಳವಾಗಿದೆ. ಅಂದರೆ ಹತ್ತು ಸಾವಿರಕ್ಕೂ ಹೆಚ್ಚಿನ ಜನ ಪುನರ್ವಸತಿ ಕೇಂದ್ರಗಳಲ್ಲಿದ್ದಾರೆ. ಮಾದಕ ವಸ್ತುಗಳ ಲಭ್ಯತೆ ಮತ್ತು ಸೇವನೆಯ ಪ್ರಮಾಣದಲ್ಲಿ ಭಯಾನಕ ಎನ್ನುವಷ್ಟು ಸತತವಾದ ಹೆಚ್ಚಳ ಉಂಟಾಗಿದೆ. ಯಾವುದೇ ಧರ್ಮ, ಜಾತಿ, ಪ್ರದೇಶ, ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯ ಜನರನ್ನೂ ಈ ಕಬಂದ ಬಾಹುಗಳು ಬಿಟ್ಟಿಲ್ಲ. 10-12 ವರ್ಷಗಳ ಮಕ್ಕಳನ್ನೂ ಬಿಡದೆ ಈ ಜಾಲಕ್ಕೆ ಸೆಳೆಯಲಾಗುತ್ತಿದೆ.
ಚಿಕ್ಕ ಮಕ್ಕಳೂ ವ್ಯಸನಿಗಳು…
ದೃಷ್ಟಾಂತಕ್ಕೆ ಹೇಳುವುದಾದರೆ, ಶ್ರೀನಗರದ ಕನ್ಯಾರ್ ನಿವಾಸಿಯಾದ ಈ 21 ವರ್ಷದ ತರುಣ ಈಗೇನೋ ಪುನರ್ವಸತಿಗೆ ದಾಖಲಾಗಿದ್ದು, ಆಪ್ತ ಸಮಾಲೋಚನೆಯನ್ನೂ ಪಡೆಯುತ್ತಿದ್ದಾನೆ. ಆದರೆ ಹೇಳಲಾರದ ನೋವನ್ನು ಮೈ-ಮನಸಲ್ಲೆಲ್ಲಾ ತುಂಬಿಕೊಂಡಿರುವ ಆತ, ʻತಾನು ಕೇವಲ 12 ವರ್ಷದವನಿದ್ದಾಗ ಗಾಂಜಾ ಸೇದುವುದಕ್ಕೆ ಪ್ರಾರಂಭಿಸಿದ್ದೆ. ಅದೆಲ್ಲ ಏನೆಂದು ತಿಳಿಯುವ ಮುನ್ನವೇ ನನಗೆ ಹೆಚ್ಚಿನ ಮಾದಕವಸ್ತುಗಳು ದೊರೆಯಲಾರಂಭಿಸಿದ್ದವು. ಕಳೆದ 5 ವರ್ಷಗಳಿಂದ ತೀವ್ರವಾದ ಹೆರಾಯಿನ್ ವ್ಯಸನಿಯಾಗಿದ್ದೇನೆ. ನೀರು-ಆಹಾರ ಯಾವುದೂ ಬೇಕಾಗುತ್ತಿರಲಿಲ್ಲ, ಕೇವಲ ಹೆರಾಯಿನ್ ಮೇಲೆಯೇ ಬದುಕಿದ್ದೆ. ಕೆಲವೇ ದಿನಗಳಲ್ಲಿ ಬರಿಗೈಯಾಗಿ, ಆರೋಗ್ಯವೂ ತೀವ್ರವಾಗಿ ಹದಗೆಟ್ಟ ಮೇಲೆ, ಮನೆಮಂದಿ ಒತ್ತಾಯದಿಂದ ಇಲ್ಲಿಗೆ ಕರೆತಂದಿದ್ದಾರೆ. ನನ್ನ ಕುಟುಂಬದ ನೆಮ್ಮದಿಯನ್ನೆಲ್ಲಾ ನಾ ಕಿತ್ತುಕೊಂಡೆʼ ಎಂದು ಕಥೆಯನ್ನು ಬಿಚ್ಚುತ್ತಾನೆ ಆತ. ಸದ್ಯಕ್ಕೆ ಶ್ರೀನಗರದಲ್ಲಿ ಸಾಂಬಾರ ಪದಾರ್ಥಗಳ ಉದ್ದಿಮೆಯೊಂದರಲ್ಲಿ ಆತ ಕೆಲಸ ಮಾಡುತ್ತಿದ್ದಾನೆ.
ವೈದ್ಯರ ಆತಂಕ
ಮಕ್ಕಳನ್ನು ಮತ್ತು ಯುವಕರನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಘೋರ ದಾಳಿಯ ಬಗ್ಗೆ ವೈದ್ಯರು ಸಹ ತೀವ್ರ ಆತಂಕ ವ್ಯಕ್ತಪಡಿಸುತ್ತಾರೆ. ಪುನರ್ವಸತಿ ಕೇಂದ್ರಗಳಲ್ಲಿನ ವೈದ್ಯರ ಪ್ರಕಾರ, ʻಹತ್ತು ವರ್ಷಗಳಷ್ಟು ಸಣ್ಣ ಮಕ್ಕಳೂ ಇದಕ್ಕೆ ಸಿಲುಕಿದ್ದನ್ನು ನೋಡಿದ್ದೇನೆ. ಹೆಚ್ಚಿನ ಮಕ್ಕಳು ಮಿತ್ರರ ಒತ್ತಾಯಕ್ಕೆಂದೇ ಪ್ರಾರಂಭಿಸುತ್ತಾರೆ. ಇವರಿಗೆ ಮೊದಲಿಗೆ ಮದ್ಯ ಅಥವಾ ಗಾಂಜಾ ನೀಡಲಾಗುತ್ತದೆ. ಕ್ರಮೇಣ ಹೆಚ್ಚಿನ ತೀವ್ರತೆಯ ಮಾದಕವಸ್ತುಗಳನ್ನು ನೀಡುತ್ತಾ, ತಮಗೇನಾಗುತ್ತಿದೆ ಎಂಬುದು ಅರಿವಿಗೆ ಬರುವ ಮುನ್ನವೇ ಅವರು ಹೆರಾಯಿನ್ ವ್ಯಸನಿಗಳಾಗಿರುತ್ತಾರೆ. 2012ರ ನಂತರದಿಂದ ನಾವು ಹೆರಾಯಿನ್ ವ್ಯಸನಿಗಳನ್ನು ಕಾಣಲು ಆರಂಭಿಸಿದ್ದೇವೆ. 2016ರಿಂದ ಇದರ ಪ್ರಮಾಣ ದಿಢೀರನೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಬರುವ ವ್ಯಸನಿಗಳನ್ನು ನೋಡಿಯೇ ಆಘಾತಗೊಂಡಿದ್ದೇವೆ. ಬರುವವರಲ್ಲಿ ಅರ್ಧದಷ್ಟು ಜನ ವಿದ್ಯಾರ್ಥಿಗಳು, ಅವರಲ್ಲಿ ಮುಕ್ಕಾಲುಪಾಲು ಜನ ತೀವ್ರವಾದ ಅನಾರೋಗ್ಯದಿಂದ, ಅಂದರೆ ಹೆಪಟೈಟಿಸ್ ಬಿ, ಸಿ ಮತ್ತು ಎಚ್‌ಐವಿಯಂಥ ಸಮಸ್ಯೆಗಳಿದ ಬಳಲುತ್ತಿದ್ದಾರೆʼ ಎಂದು ಆತಂಕ ತೋಡಿಕೊಂಡಿದ್ದಾರೆ.
ಅಂಕೆ ಮೀರುತ್ತಿರುವ ವ್ಯಸನ
ಈ ಬಗ್ಗೆ ಆಡಳಿತಾಧಿಕಾರಿಗಳು ತಿಳಿಯದವರೇನಲ್ಲ. ಯಾವೆಲ್ಲ ರೀತಿಯಲ್ಲಿ ಈ ಸಮಸ್ಯೆಗೆ ಕಡಿವಾಣ ಹಾಕುವುದಕ್ಕೆ ಪ್ರಯತ್ನಿಸಿದರೂ, ಮಾದಕವಸ್ತುಗಳ ಸಮಸ್ಯೆ ಅಂಕೆ ಮೀರುತ್ತಿದೆ. ಅವರ ಚಿಂತೆಗೆ ಇದಕ್ಕಿಂತಲೂ ದೊಡ್ಡ ಕಾರಣ, ಇಡೀ ರಾಜ್ಯ ಇನ್ನು ಕೆಲವೇ ವರ್ಷಗಳಲ್ಲಿ ತೀವ್ರವಾದ ಅನಾರೋಗ್ಯ ಸಮಸ್ಯೆಯಿಂದ ತತ್ತರಿಸಲಿದೆ ಎಂಬ ಘೋರ ಸತ್ಯ. ʻನಮ್ಮಲ್ಲಿ ಸುಮಾರು 1200 ಹೆಪಟೈಟಿಸ್-ಸಿ ರೋಗಿಗಳು ದಾಖಲಾಗಿದ್ದಾರೆ. ಅವರಲ್ಲಿ ಶೇ. 80 ಮಂದಿ ಮಾದಕದ್ರವ್ಯ ವ್ಯಸನಿಗಳು. ಈ ರೋಗಗಳ ಔಷಧಿಗಳು ತುಂಬ ದುಬಾರಿ. ನಾವು ನೀಡುವ ಈ ಔಷಧಿಗಳನ್ನು ಮಾರಿ, ಆ ಹಣದಲ್ಲೇ ಮಾದಕವಸ್ತು ಖರೀದಿಸುವವರೂ ಇಲ್ಲದಿಲ್ಲʼ ಎಂದು ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕ ಯಾಸಿರ್ ಚೌಧರಿ ಬೇಸರಿಸುತ್ತಾರೆ.
ಮಹಿಳೆಯರೂ ಹೊರತಾಗಿಲ್ಲ
ಮಾದಕದ್ರವ್ಯ ವ್ಯಸನಿಗಳ ಪೈಕಿ ಶೇ. 30 ಮಂದಿ ಮಹಿಳೆಯರು. ಆದರೆ ಇದರಿಂದ ಬಳಲುವ ಸ್ತ್ರೀಯರಲ್ಲಿ ಹೆಚ್ಚಿನ ಮಂದಿ ವೈದ್ಯಕೀಯ ಅಥವಾ ಆಪ್ತ ಸಮಾಲೋಚಕರ ನೆರವನ್ನೂ ಕೋರುತ್ತಿಲ್ಲ ಎಂಬುದು ಇನ್ನೂ ಆತಂಕಕಾರಿ ಎನ್ನುತ್ತಾರೆ ಈ ಬಗ್ಗೆ ಜಾಗೃತಿಗಾಗಿ ಶ್ರಮಿಸುತ್ತಿರುವ ಕಾರ್ಯಕರ್ತರು. ʻಇದಕ್ಕೆ ಸಾಮಾಜಿಕ ಕಾರಣಗಳೋ ಅಥವಾ ಇನ್ನಿತರ ಯಾವುದೋ ಕಾರಣಗಳು ಇರಬಹುದು. ಆದರೆ ಅವರು ನೆರವು ಕೋರಿ ಬರುವಷ್ಟರಲ್ಲಿ ಆರೋಗ್ಯ ಸುಧಾರಿಸಲಾಗದಷ್ಟು ಹದಗೆಟ್ಟಿರುತ್ತದೆ. ಇಂಥ ಮಹಿಳೆಯರಿಗಾಗಿ ಪ್ರತ್ಯೇಕ ಕೇಂದ್ರಗಳನ್ನು ತೆರೆಯಬೇಕಾದ್ದು ಇಂದಿನ ತುರ್ತು ಅಗತ್ಯ. ಹಾಗಾದರೆ ಮಾತ್ರ ಅವರ ನೆರವಿಗೆ ಧಾವಿಸಲು ಸಾಧ್ಯʼ ಎನ್ನುತ್ತಾರೆ ಪುನರ್ವಸತಿಗಾಗಿ ಬೇಕಿರುವವರಿಗಾಗಿ ಶ್ರಮಿಸುತ್ತಿರುವ ಸಮಾಲೋಚಕಿಯೊಬ್ಬರು.
ಶಾಲೆ, ಕಾಲೇಜು ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಹೆರಾಯಿನ್‌ನಂಥ ವಸ್ತುಗಳು ದೊರೆಯುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದನ್ನು ಮೊದಲು ಮಟ್ಟ ಹಾಕದಿದ್ದಲ್ಲಿ, ಮಾದಕವಸ್ತು ವಿತರಣೆಯ ಸರಪಳಿಯನ್ನು ತುಂಡರಿಸದಿದ್ದಲ್ಲಿ, ಯಾರು ಎಲ್ಲಿಯೂ ಈ ಜಾಲಗಳ ಸೆರೆ ಸಿಲುಕಬಹುದು ಎಂಬುದು ಈ ಕಾರ್ಯಕರ್ತದ ಕಳಕಳಿ.
ಇದನ್ನೂ ಓದಿ: Kashmir Drugs : ಕಾಶ್ಮೀರ ಮಾದಕದ್ರವ್ಯ ಹಾವಳಿಗೆ ಗಡಿಯಾಚೆಯ ನಂಟು