Site icon Vistara News

Narendra Modi: ಮತದಾನದ ಬಳಿಕ ಮಗುವನ್ನು ಎತ್ತಿ ಆಡಿಸಿದ ಪ್ರಧಾನಿ ಮೋದಿ; ವಿಡಿಯೋ ನೋಡಿ

Narendra Modi

ಅಹ್ಮದಾಬಾದ್‌: ದೇಶಾದ್ಯಂತ ಲೋಕಸಭೆ ಚುನಾವಣೆ(Lok Sabha Election 2024)ಯ ಮೂರನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi), ಗೃಹಸಚಿವ ಅಮಿತ್‌ ಶಾ(Amit shah) ಸೇರಿದಂತೆ ಅನೇಕರು ಬೆಳ್ಳಂಬೆಳಗ್ಗೆ ತಮ್ಮ ಮತ ಹಕ್ಕನ್ನು ಚಲಾಯಿಸಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನ ನಿಶಾನ್‌ ಹೈಯರ್‌ ಸೆಕಂಡರಿ ಶಾಲೆ (Nishan Higher Secondary School)ಯ ಮತದಾನ ಕೇಂದ್ರದಲ್ಲಿ ಬೆಳಗ್ಗೆ 7.45ರ ಸುಮಾರಿಗೆ ತಮ್ಮ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿಯನ್ನು ನೋಡಲೆಂದು ಸಹಸ್ರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಈ ವೇಳೆ ಅಲ್ಲೇ ಇದ್ದ ಮಹಿಳೆಯ ಮಗುವೊಂದನ್ನು ಎತ್ತಿಕೊಂಡ ಪ್ರಧಾನಿ ಮುದ್ದಾಡಿದ್ದಾರೆ.

ಪ್ರಧಾನಿ ಮೋದಿಗೆ ಮಕ್ಕಳ ಜೊತೆಗೆ ಅವಿನಾಭಾವ ಸಂಬಂಧವಿದೆ. ಅನೇಕ ಬಾರಿ ಮಕ್ಕಳೊಂದಿಗೆ ತಾವೊಬ್ಬ ಪ್ರಧಾನಿ ಎಂಬುದನ್ನೂ ಮರೆತು ಅತ್ಯಂತ ಪ್ರೀತಿಯಿಂದ ಮಕ್ಕಳ ಜೊತೆ ಬೆರೆಯುವುದನ್ನು ಆಗಾಗ ಕಾಣಬಹುದಾಗಿದೆ. ಕಳೆದ ಬಾರಿ ಕಲಬುರಗಿಯಲ್ಲಿ ಪ್ರಚಾರ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ಅವರನ್ನು ಕಾಣಲೆಂದೇ ಬಂದಿದ್ದ ಮಕ್ಕಳ ಜೊತೆ ಕೆಲ ಸಮಯ ಕಳೆದು, ಮಕ್ಕಳಿಗೆ ಕೆಲವೊಂದು ಬೆರಳಿಗೆ ಮಾಡುವ ವ್ಯಾಯಾಮಗಳನ್ನು ತೋರಿಸಿಕೊಟ್ಟಿದ್ದರು. ಇದೀಗ ಮತ್ತೆ ಅಂತಹದ್ದೇ ವಿಶೇಷ ಕ್ಷಣದೊಂದಿಗೆ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:Road rage: BMW ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಪುಂಡರ ಅಟ್ಟಹಾಸ, ಇಲ್ಲಿದೆ ವಿಡಿಯೋ

ಪ್ರಧಾನಿಯನ್ನು ಕಾಣಲೆಂದು ನೆರೆದಿದ್ದ ಜನರ ಬಳಿ ತೆರಳಿದ್ದ ಪ್ರಧಾನಿಯನ್ನು ಮಹಿಳೆಯ ಕೈಯಲ್ಲಿದ್ದ ಮಗುವೊಂದು ಸೆಳೆದಿತ್ತು. ಮಗುವಿನತ್ತ ಹೋದ ಪ್ರಧಾನಿ ಅದನ್ನು ಎತ್ತಿಕೊಂಡು ಮುದ್ದಾಡಿದರು. ಕೆಲ ಹೊತ್ತು ಮಗುವಿನ ಜೊತೆ ಆಟ ಆಡಿದರು. ಮಗುವಿನ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಲ್ಲಿ ನೆರೆದಿದ್ದ ಜನ ಮೋದಿ, ಮೋದಿ ಎಂದು ಹರ್ಷೋದ್ಘಾರ ಹಾಕಿದ್ದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮತದಾನ ಕೇಂದ್ರದ ಬಳಿಗೆ ಪ್ರಧಾನಿ ಸುಮಾರು 7.30ರ ಹೊತ್ತಿಗೆ ಆಗಮಿಸಿದ್ದರು. ಅಮಿತ್‌ ಶಾ ಪ್ರಧಾನಿಯನ್ನು ಸ್ವಾಗತಿಸಿದರು. ಬಳಿಕ ಇಬ್ಬರು ನಾಯಕರು ಸುತ್ತ ನೆರೆದಿದ್ದ ಸಾವರ್ಜನಿಕರತ್ತ ಕೈ ಬೀಸುತ್ತ ಮತಗಟ್ಟೆಗೆ ತೆರಳಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರು ಮೋದಿ ಪರ ಘೋಷಣೆ ಕೂಗಿದರು. ಈ ಮಧ್ಯೆ ಅಭಿಮಾನಿಗಳಿಗೆ ಮೋದಿ ಆಟೋಗ್ರಾಫ್‌ ನೀಡುವುದನ್ನೂ ಮರೆಯಲಿಲ್ಲ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ ಅವರು, ಈ ಮೂರನೇ ಹಂತದಲ್ಲಿ ಎಲ್ಲರೂ ಹಕ್ಕು ಚಲಾಯಿಸುವ ಮೂಲಕ ದಾಖಲೆ ಪ್ರಮಾಣದ ಮತದಾನಕ್ಕೆ ಕಾರಣವಾಗಬೇಕು ಎಂದು ಕರೆ ನೀಡಿದ್ದಾರೆ. ʼʼಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.

Exit mobile version