ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿರುವ ಹೈದರಾಬಾದ್ ಹೌಸ್‌ನಲ್ಲಿ ಅವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ, ಇಬ್ಬರೂ ದ್ವಿಪಕ್ಷೀಯ ಮಾತುಕತೆ ಜತೆಗೆ, ಸಂಬಂಧ ವೃದ್ಧಿ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಮೋದಿ ಅವರು ಭಾರತ-ಇಟಲಿ ಮಧ್ಯೆ ಸ್ಟಾರ್ಟಪ್ ಬ್ರಿಡ್ಜ್ ಘೋಷಿಸಿದ್ದಾರೆ.
“ಭಾರತ ಹಾಗೂ ಇಟಲಿ ಸಂಬಂಧಕ್ಕೆ 75 ವರ್ಷ ತುಂಬಿದೆ. ಇಂತಹ ಸಂತಸದ ಸಂದರ್ಭದಲ್ಲಿ ನಮ್ಮದು ವ್ಯೂಹಾತ್ಮಕ ಸಂಬಂಧ ಎಂಬುದಾಗಿ ಘೋಷಿಸುತ್ತಿದ್ದೇವೆ. ಹಾಗೆಯೇ, ಭಾರತ ಹಾಗೂ ಇಟಲಿ ಮಧ್ಯೆ ಸ್ಟಾರ್ಟಪ್ ಬ್ರಿಡ್ಜ್ ರಚನೆ ಮಾಡಲು ನಾವು ತೀರ್ಮಾನಿಸಿದ್ದೇವೆ. ಈಗಾಗಲೇ ನವೀಕರಿಸಬಹುದಾದ ಇಂಧನ, ಟೆಲಿಕಾಂ, ಸೆಮಿಕಂಡಕ್ಟರ್, ಬಾಹ್ಯಾಕಾಶ ಸೇರಿ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಂಬಂಧ ಹೊಂದಿದ್ದೇವೆ. ಈಗ ಸ್ಟಾರ್ಟಪ್ ಬ್ರಿಡ್ಜ್ ಘೋಷಿಸುತ್ತಿದ್ದೇವೆ” ಎಂದು ಮಾತುಕತೆ ಬಳಿಕ ಹೇಳಿದರು.
ಏನಿದು ಸ್ಟಾರ್ಟಪ್ ಬ್ರಿಡ್ಜ್?
ಯಾವುದೇ ಎರಡು ದೇಶಗಳು ಪರಸ್ಪರ ಸಹಕಾರ, ಮಾಹಿತಿ ವಿನಿಮಯ ಸೇರಿ ಹಲವು ದಿಸೆಯಲ್ಲಿ ಸ್ಟಾರ್ಟಪ್‌ಗಳಿಗೆ ಉತ್ತೇಜಿಸುವುದು ಸ್ಟಾರ್ಟಪ್ ಬ್ರಿಡ್ಜ್ ಆಗಿದೆ. ಯಾವುದೇ ಸ್ಟಾರ್ಟಪ್ ಕೈಗೊಳ್ಳುವ ಮುನ್ನ ಅದರ ಕುರಿತು ಮಾಹಿತಿ ವಿನಿಮಯ, ಸಂಪನ್ಮೂಲ ಕ್ರೋಡೀಕರಣ, ಹೂಡಿಕೆ ಸೇರಿ ಹಲವು ವಿಷಯಗಳನ್ನು ಹಂಚಿಕೊಳ್ಳುವುದು, ಸಹಕಾರ ನೀಡುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ: Giorgia Meloni On Modi: ವಿಶ್ವ ನಾಯಕರಲ್ಲೇ ಮೋದಿ ಹೆಚ್ಚು ಪ್ರೀತಿಪಾತ್ರರು, ಇಟಲಿ ಪ್ರಧಾನಿ ಮೆಲೋನಿ ಮೆಚ್ಚುಗೆ