Site icon Vistara News

Narendra Modi: ಮುಸ್ಲಿಂ ಮಹಿಳೆಯರ ಜತೆ ರಕ್ಷಾಬಂಧನ ಆಚರಿಸಿ; ಬಿಜೆಪಿ ನಾಯಕರಿಗೆ ಮೋದಿ ಕೊಟ್ಟ ಟಾಸ್ಕ್‌ ಏನೇನು?

Narendra Modi Raksha Bandhan

Narendra Modi asks BJP leaders to reach out to Muslim women during Raksha Bandhan

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಎನ್‌ಡಿಎ ನಾಯಕರ ಸಭೆ, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ, ಬಿಜೆಪಿ ಪದಾಧಿಕಾರಿಗಳ ಬದಲಾವಣೆ ಸೇರಿ ಹಲವು ರಣತಂತ್ರ ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ, “ಸಹೋದರತ್ವ ಸಾರುವ ರಕ್ಷಾಬಂಧನದ ದಿನ ಬಿಜೆಪಿ ನಾಯಕರು ಮುಸ್ಲಿಂ ಮಹಿಳೆಯರ ಜತೆಗೂಡಿ ರಕ್ಷಾಬಂಧನ ಆಚರಿಸಬೇಕು” ಎಂಬುದಾಗಿ ನರೇಂದ್ರ ಮೋದಿ (Narendra Modi) ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್‌ನ ಎನ್‌ಡಿಎ ಸಂಸದರನ್ನು ಒಳಗೊಂಡ ಸಭೆ ನಡೆಸಿದ ಮೋದಿ ಅವರು ಬಿಜೆಪಿ ಸಂಸದರಿಗೆ ಈ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಬಿಜೆಪಿ ಸಂಸದರು, ನಾಯಕರು ಈ ಬಾರಿಯ ರಕ್ಷಾಬಂಧನವನ್ನು ಮುಸ್ಲಿಂ ಮಹಿಳೆಯರ ಜತೆ ಆಚರಿಸಬೇಕು” ಎಂಬುದಾಗಿ ಮೋದಿ ಸೂಚಿಸಿದ್ದಾರೆ. ಆ ಮೂಲಕ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರ ಮತಗಳನ್ನು ಸೆಳೆಯುವ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ತ್ರಿವಳಿ ತಲಾಕ್‌ ಪ್ರಸ್ತಾಪ

ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಕ್‌ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ತೀರ್ಮಾನ, ಅದರಿಂದ ಮುಸ್ಲಿಂ ಮಹಿಳೆಯರಿಗೆ ಆಗುವ ಅನುಕೂಲದ ಬಗ್ಗೆಯೂ ಮನವರಿಕೆ ಮಾಡುವಂತೆ ಮೋದಿ ಅವರು ಸೂಚಿಸಿದ್ದಾರೆ. “ಮುಸ್ಲಿಂ ಮಹಿಳೆಯರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ಯೋಜನೆಗಳಿಂದ ಅವರಿಗೆ ಆಗುತ್ತಿರುವ ಪ್ರಯೋಜನಗಳ ಬಗ್ಗೆ ವಿವರಿಸಬೇಕು. ತ್ರಿವಳಿ ತಲಾಕ್‌ ರದ್ದಗೊಳಿಸಿದ ತೀರ್ಮಾನದ ಬಗ್ಗೆಯೂ ತಿಳಿಸಬೇಕು” ಎಂಬುದಾಗಿ ಮೋದಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Opposition Meet: ಯಾವ ಪಕ್ಷ ಯಾವ ಕೂಟದಲ್ಲಿದೆ? ‘ಎನ್‌ಡಿಎ’, ‘ಇಂಡಿಯಾ’ ಪರ ಇರುವ ಪಕ್ಷಗಳೆಷ್ಟು?

2024ರ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರ ಬೆಂಬಲ ಗಳಿಸುವುದು ಮೋದಿ ಅವರ ರಣತಂತ್ರವಾಗಿದೆ. ಇದಕ್ಕಾಗಿ ಈಗಾಗಲೇ ಮೋದಿ ಅವರು ಬಿಜೆಪಿ ನಾಯಕರಿಗೆ ಹಲವು ಸೂಚನೆ ನೀಡಿದ್ದಾರೆ. ಮುಸ್ಲಿಮರಿಗೆ ಕೇಂದ್ರದ ಯೋಜನೆಗಳ ಕುರಿತು ಮಾಹಿತಿ ನೀಡುವುದು, ಅವರ ವಿಶ್ವಾಸ ಗಳಿಸುವುದು ಸೇರಿ ವಿವಿಧ ಟಾಸ್ಕ್‌ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೋದಿ ಅವರು ಮನ್‌ ಕೀ ಬಾತ್‌ ರೇಡಿಯೊ ಕಾರ್ಯಕ್ರಮದಲ್ಲಿ ಮೆಹ್ರೆಮ್‌ (ಮೆಕ್ಕಾ ಯಾತ್ರೆಗೆ ತೆರಳುವ ಮುಸ್ಲಿಂ ಮಹಿಳೆಯರ ಜತೆ ತೆರಳುವ ಪುರುಷ) ರದ್ದತಿ ಕುರಿತು ಉಲ್ಲೇಖಿಸಿದ್ದರು. ಈ ಬಾರಿ ಮೆಹ್ರೆಮ್‌ ಇಲ್ಲದೆ ನಾಲ್ಕು ಸಾವಿರ ಮಹಿಳೆಯರು ಮೆಕ್ಕಾ ಯಾತ್ರೆ ಕೈಗೊಂಡಿದ್ದಾರೆ ಎಂದು ಹೇಳಿದ್ದರು. ದೇಶದಲ್ಲಿ ಆಗಸ್ಟ್‌ 30 ರಂದು ರಕ್ಷಾಬಂಧನ ಆಚರಿಸಲಾಗುತ್ತದೆ.

Exit mobile version