ನವ ದೆಹಲಿ: ಜಿ 7 ಶೃಂಗಸಭೆಗಾಗಿ (G7 summit) ಜರ್ಮನಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಚಹಾ ಸೇವನೆ ಮಾಡುತ್ತ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಬ್ಬರೂ ನಾಯಕರು ಕೈಯಲ್ಲಿ ಚಹಾ ಕಪ್ ಹಿಡಿದುಕೊಂಡು ಸೌಹಾರ್ದಯುತ ಮಾತುಕತೆ ನಡೆಸಿರುವ ಫೋಟೋ ಈಗ ವೈರಲ್ ಆಗಿದೆ. ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ತಾವಿರುವ ಫೋಟೋವೊಂದನ್ನು ನರೇಂದ್ರ ಮೋದಿ ಜೂ.27 ರಂದು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡು “ನನ್ನ ಸ್ನೇಹಿತ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಎಮ್ಯಾನುಯೆಲ್ ಮ್ಯಾಕ್ರನ್ ಅವರು ಕಳೆದ ಮೇ ತಿಂಗಳಲ್ಲಿ ಪ್ಯಾರಿಸ್‌ನಲ್ಲಿ ಭೇಟಿಯಾಗಿದ್ದರು. ಆಗಲೂ ಇವರಿಬ್ಬರು ತುಂಬ ಪ್ರೀತಿಯಿಂದ ಅಪ್ಪಿಕೊಂಡು ಪರಸ್ಪರರಿಗೆ ಶುಭ ಹಾರೈಸಿಕೊಂಡಿದ್ದರು. ಈಗ ಜರ್ಮನಿಯಲ್ಲಿ ಸಹ ಇವರಿಬ್ಬರು ಆತ್ಮೀಯವಾಗಿ ಕೈ ಹಿಡಿದುಕೊಂಡು, ತಬ್ಬಿಕೊಂಡು ಗ್ರೀಟ್ ಮಾಡಿಕೊಂಡ ಫೋಟೋಗಳು ವೈರಲ್ ಆಗುತ್ತಿವೆ. ಅಂದಹಾಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಚಾಯ್ ಪೆ ಚರ್ಚಾದ ಫೋಟೋವನ್ನು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಶೇರ್ ಮಾಡಿಕೊಂಡಿದ್ದಾರೆ.
ಜರ್ಮನಿಯ ಸ್ಕ್ಲೋಸ್ ಎಲ್ಮೌ ಹೋಟೆಲ್‌ನಲ್ಲಿ ಜಿ 7 ಶೃಂಗಸಭೆ ನಡೆಯುತ್ತಿದೆ. ಈ ಜಿ ೭ ಗುಂಪಿನಲ್ಲಿ ಅಮೆರಿಕ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಮಾತ್ರವಿದ್ದರೂ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಭಾರತ, ಅರ್ಜೆಂಟಿನಾ, ಇಂಡೋನೇಷ್ಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾದ ನಾಯಕರಿಗೂ ಆಹ್ವಾನ ನೀಡಲಾಗಿತ್ತು. ಅದರಂತೆ ಈ ದೇಶಗಳ ನಾಯಕರೆಲ್ಲ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಈ ಶೃಂಗದಲ್ಲಿ ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಹಲವು ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಶೃಂಗಸಭೆಯಾಚೆಗೆ ವಿವಿಧ ದೇಶಗಳ ದಿಗ್ಗಜರು ವೈಯಕ್ತಿಕವಾಗಿ ಭೇಟಿಯಾಗಿಯೂ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಶೃಂಗಸಭೆಯಲ್ಲಿನ ಅಪೂರ್ವ ಕ್ಷಣಗಳ ಫೋಟೋಗಳು ತುಂಬಿಹೋಗಿವೆ.
ಇದನ್ನೂ ಓದಿ: G7 Summit: ಜರ್ಮನಿ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಎಸಿ ಇಲ್ಲದ ಹೋಟೆಲ್‌ನಲ್ಲಿ ಶೃಂಗಸಭೆ !