ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಮುಸ್ಲಿಂ ವಿರೋಧಿ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಮೋದಿ ಟಾಂಗ್ ಕೊಟ್ಟಿದ್ದು, ಹಿಂದೂ ಮುಸ್ಲಿಂ ಅಂತ ತಾರತಮ್ಯ ಮಾಡಿದ ದಿನ ನಾನು ರಾಜಕೀಯ ಬದುಕಿಗೆ ಅನರ್ಹನಾಗುತ್ತೇನೆ. ನಾನು ನನ್ನ ಜೀವನದಲ್ಲಿ ಎಂದಿಗೂ ಹಿಂದೂ-ಮುಸ್ಲಿಂ(Hindu-Muslim) ಎಂದು ಭೇದ ಮಾಡೋದಿಲ್ಲ ಎಂಬುದು ನನ್ನ ಬದುಕಿನ ಧ್ಯೇಯ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಎಂದಿಗೂ ಹಿಂದೂ ಮುಸ್ಲಿಂ ಎಂದು ಹೇಳುವುದಿಲ್ಲ. ಹಿಂದು ಮುಸ್ಲಿಂ ಅಂತ ಹೇಳಿಕೊಂಡು ರಾಜಕೀಯ ಮಾಡಿದರೆ ನಾನು ಸಾರ್ವಜನಿಕ ಜೀವಕ್ಕೆ ಅರ್ಹನಾದ ವ್ಯಕ್ತಿಯಾಗುವುದಿಲ್ಲ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದರು. ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯಿಂದ ಸಂಪೂರ್ಣವಾಗಿ ಮುಕ್ತರಾಗುವಲ್ಲಿ ಏಕೆ ಯಶಸ್ವಿಯಾಗಿಲ್ಲ ಎಂಬ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಮುಸ್ಲಿಂ ಎಂಬ ಪ್ರಶ್ನೆಯಲ್ಲ. 2002ರ ನಂತರ ನನ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ನಡೆಯಿತು. ನಮ್ಮ ಮನೆಯ ಸುತ್ತಮುತ್ತ ಎಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ನಮ್ಮ ಮನೆಯಲ್ಲೂ ಈದ್ ಆಚರಿಸಲಾಗುತ್ತಿತ್ತು. ಈದ್ ಸಂದರ್ಭದಲ್ಲಿ ನಮ್ಮ ಮನೆಗಳಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಎಲ್ಲಾ ಮುಸ್ಲಿಮರ ಮನೆಗಳಿಂದ ಆಹಾರ ಬರುತ್ತಿತ್ತು. ನಾನು ಅಂತಹ ವ್ಯವಸ್ಥೆಯಲ್ಲೇ ಬೆಳೆದಿದ್ದು. ನನ್ನ ಅನೇಕ ಸ್ನೇಹಿತರು ಮುಸ್ಲಿಮರೇ ಆಗಿದ್ದಾರೆ ಎಂದು ಸ್ಪಷ್ಟನೆ ಕೊಟ್ಟರು.
ರಾಜಸ್ಥಾನದಲ್ಲಿ ಸಾರ್ವಜನಿಕ ಭಾಷಣದ ವೇಳೆ ರಾಹುಲ್ ಗಾಂಧಿಯವರ ಸಂಪತ್ತಿನ ಹಂಚಿಕೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು, “ಮೊದಲು ಅವರ ಸರ್ಕಾರ ಇದ್ದಾಗ ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಮುಸ್ಲಿಮರದ್ದು ಎಂದು ಹೇಳಿದ್ದರು. ಹಾಗಿದ್ದರೆ ನಿಮ್ಮ ಸಂಪತ್ತನ್ನು ಕಿತ್ತು ಯಾರಿಗೆ ನೀಡಲು ಕಾಂಗ್ರೆಸ್ ಬಯಸುತ್ತಿದೆ ಎಂದು ತಿಳಿಯಿತೇ? ಯಾರಿಗೆ ಅಧಿಕ ಮಕ್ಕಳಿರುತ್ತಾರೋ, ಯಾರು ಒಳನುಸುಳುಕೋರರು ಆಗಿರುತ್ತಾರೋ ಅಂತವರಿಗೆ ಹಂಚುತ್ತಾರೆ. ನಿಮಗಿದು ಒಪ್ಪಿಗೆಯೇ” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ:Bank Loan Fraud : 34,000 ಕೋಟಿ ರೂ. ಬ್ಯಾಂಕ್ ವಂಚನೆ, ಡಿಎಚ್ಎಫ್ಎಲ್ ಮಾಜಿ ನಿರ್ದೇಶಕನ ಬಂಧನ
ಕಾಂಗ್ರೆಸ್‌ನವರಿಗೆ ಮಹಿಳೆಯರ ಮಂಗಳಸೂತ್ರದ ಮೇಲೂ ಕಣ್ಣು ಬಿದ್ದಿದೆ. ಮಾತೆಯರು, ಭಗಿನಿಯರ ಚಿನ್ನವನ್ನು ದೋಚುವ ದುರುದ್ದೇಶ ಇವರದ್ದು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣಗಳ ರೂಪದಲ್ಲಿ ಧರಿಸಲು ಮಾತ್ರವಲ್ಲ, ಅದನ್ನು ರಸಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈಗ ಅವರ ಕಣ್ಣು ಮಹಿಳೆಯರ ಮಂಗಳಸೂತ್ರದ ಮೇಲೆ ನೆಟ್ಟಿದೆ. ತಾಯಿ ಮತ್ತು ಸಹೋದರಿಯರ ಚಿನ್ನವನ್ನು ದೋಚುವುದು ಇವರ ಉದ್ದೇಶ. ಹೀಗಾಗಿ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲʼʼ ಎಂದು ಮೋದಿ ಹೇಳಿದ್ದರು. ಇದಾದ ಬಳಿಕ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ಮುಸ್ಲಿಮರ ವಿರುದ್ಧವಾಗಿದೆ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.