ನವದೆಹಲಿ: ದೇಶಾದ್ಯಂತ ಬೇಸಿಗೆ ಆರಂಭವಾಗುತ್ತಿದ್ದು, ಉಷ್ಣ ಮಾರುತ, ಬಿಸಿ ಗಾಳಿ ಹೊಡೆತ ಸೇರಿ ಎಲ್ಲ ರೀತಿಯ ಹವಾಮಾನ ವೈಪರೀತ್ಯ ಎದುರಿಸುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ (Narendra Modi Meeting) ನಡೆಸಿದ್ದಾರೆ. ನರೇಂದ್ರ ಮೋದಿ ಅವರ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು, ಎಲ್ಲ ಇಲಾಖೆ ಅಧಿಕಾರಿಗಳಿಗೆ ಮೋದಿ ಹಲವು ಸೂಚನೆ ನೀಡಿದ್ದಾರೆ.
ಮುಂದಿನ ಹಲವು ತಿಂಗಳುಗಳ ಹವಾಮಾನ ಬದಲಾವಣೆ, ಬೇಸಿಗೆ, ಉಷ್ಣ ಗಾಳಿ ಪರಿಣಾಮ, ಇದರಿಂದ ಹಿಂಗಾರು ಬೆಳೆಗಳ ಮೇಲೆ ಉಂಟಾಗುವ ಪರಿಣಾಮ, ಯಾವುದೇ ವೈಪರೀತ್ಯ ಉಂಟಾದರೆ ತಕ್ಷಣ ಪರಿಹಾರ ಒದಗಿಸಲು ತೆಗೆದುಕೊಂಡಿರುವುದು ಸೇರಿ ಹಲವು ಕ್ರಮಗಳ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದರು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದರು.
ಇನ್ನು ಸಭೆಯಲ್ಲಿ ಮಾತನಾಡಿದ ಮೋದಿ, “ಯಾವುದೇ ಹವಾಮಾನ ವೈಪರೀತ್ಯ ಉಂಟಾದರೂ ವಿಪತ್ತು ನಿರ್ವಹಣಾ ಪಡೆಗಳು ಪರಿಹಾರ, ರಕ್ಷಣೆಗೆ ಸಿದ್ಧವಾಗಿರಬೇಕು. ಹವಾಮಾನ ಇಲಾಖೆಯು ನಿತ್ಯ ಹವಾಮಾನ ವರದಿ ನೀಡಬೇಕು. ಅಧಿಕಾರಿಗಳು ಕೂಡ ಸಕಲ ರೀತಿಯಲ್ಲಿ ಯಾವುದೇ ಪರಿಸ್ಥಿತಿ ನಿಯಂತ್ರಣ ಮಾಡಲು ಸನ್ನದ್ಧವಾಗಿರಬೇಕು” ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಸಲಹೆ ಮೇರೆಗೆ 22ಕೆಜಿ ತೂಕ ಇಳಿಸಿಕೊಂಡ ಕೇಂದ್ರ ಸಚಿವ; ಆಯುರ್ವೇದ ಪದ್ಧತಿ ಅನುಸರಿಸಿ ಡಯೆಟ್