ಜೈಪುರ: ರಾಜಸ್ಥಾನದಲ್ಲಿ ವರ್ಷಾಂತ್ಯಕ್ಕೆ ನಡೆಯುವ ವಿಧಾನಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ರಣಕಹಳೆ ಊದಿದ್ದಾರೆ. ರಾಜಸ್ಥಾನದ ಅಜ್ಮೇರ್‌ನಲ್ಲಿ ಬೃಹತ್ ರ‍್ಯಾಲಿಗೂ ಮುನ್ನ ಅವರು ಪುಷ್ಕರ್‌ನಲ್ಲಿರುವ ಬ್ರಹ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಮಾಡಿದರು. ದೇವರಿಗೆ ವಿಶೇಷ ಆರತಿ ಬೆಳಗಿದ ಅವರು ಪೂಜೆಯನ್ನೂ ಮಾಡಿದರು. ಬಳಿಕ ದೇವಾಲಯವನ್ನು ಪ್ರದಕ್ಷಿಣೆ ಹಾಕಿದರು. ಇದಾದ ನಂತರ ದೇಗುಲದ ಅರ್ಚಕರು ಮೋದಿ ಅವರಿಗೆ ನೆನಪಿನ ಕಾಣಿಕೆ ನೀಡಿದರು.
ದೇವಾಲಯದ ಭೇಟಿ ಬಳಿಕ ಅಜ್ಮೇರ್‌ನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ನರೇಂದ್ರ ಮೋದಿ ಮಾತನಾಡಿದರು. ಇದೇ ವೇಳೆ ಅವರು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಗ್ಯಾರಂಟಿಯನ್ನೂ ಟೀಕಿಸಿದರು. “ಪ್ರತಿಪಕ್ಷಗಳಿಗೆ ನನ್ನನ್ನು ಕಂಡರೆ ಅಸಹಿಷ್ಣುತೆ ಇದೆ. ಹಾಗಾಗಿಯೇ, ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮದ ವಿಚಾರದಲ್ಲೂ ಪ್ರತಿಪಕ್ಷಗಳು ರಾಜಕೀಯ ಮಾಡಿದವು. ಆ ಮೂಲಕ ಸಂಸತ್ ಭವನದ ಕಾರ್ಮಿಕರಿಂದ ಹಿಡಿದು ಎಲ್ಲರಿಗೂ ಅವಮಾನ ಮಾಡಿದವು” ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿಗೆ ಕುಟುಕಿದ ಮೋದಿ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳಿಗೆ ಮೋದಿ ರಾಜಸ್ಥಾನದಲ್ಲೂ ಕುಟುಕಿದರು. “ಕಾಂಗ್ರೆಸ್‌ಗೆ ಗ್ಯಾರಂಟಿ ನೀಡುವ ಚಾಳಿ ಈಗಿನದ್ದಲ್ಲ. 50 ವರ್ಷಗಳ ಹಿಂದೆಯೇ ಬಡತನ ನಿರ್ಮೂಲನೆ (ಗರೀಬಿ ಹಠಾವೋ) ಕುರಿತು ಕಾಂಗ್ರೆಸ್ ಗ್ಯಾರಂಟಿ ನೀಡಿತ್ತು. ಆದರೆ, ಕಾಂಗ್ರೆಸ್ ಬಡವರಿಗೆ ದ್ರೋಹ ಮಾಡಿತು. ರಾಜಸ್ಥಾನದಲ್ಲೂ ಕಾಂಗ್ರೆಸ್ ಜನರಿಗೆ ಅನ್ಯಾಯ ಮಾಡಿದೆ” ಎಂದು ಕುಟುಕಿದರು.
ಬ್ರಹ್ಮ ದೇಗುಲದಲ್ಲಿ ಮೋದಿ ವಿಶೇಷ ಪೂಜೆ
ಒಂಬತ್ತು ವರ್ಷದ ಸಾಧನೆ ತಿಳಿಸಿದ ಪ್ರಧಾನಿ
ಕಳೆದ ಒಂಬತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಮಾಡಿದ ಸಾಧನೆಯನ್ನು ಮೋದಿ ಜನರ ಎದುರಿಟ್ಟರು. “ಕಳೆದ ಒಂಬತ್ತು ವರ್ಷಗಳ ಹಿಂದೆ ದೇಶವನ್ನು ಪ್ರಧಾನಿ ಅಲ್ಲ, ಸೂಪರ್ ಪ್ರಧಾನಿ ಆಳುತ್ತಿದ್ದರು. ಆದರೆ, ನೀವು ನನಗೆ ಒಂದು ವೋಟು ನೀಡಿದ ಕಾರಣ ದೇಶದ ಗತಿಯೇ ಬದಲಾಯಿತು. ಒಂಬತ್ತು ವರ್ಷದಿಂದ ನಮ್ಮ ಸರ್ಕಾರವು ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಬಡವರು, ಯುವಕರು, ಮಹಿಳೆಯರು ಸೇರಿ ಎಲ್ಲರ ಏಳಿಗೆಗೆ ಶ್ರಮಿಸುತ್ತಿದೆ” ಎಂದು ಹೇಳಿದರು.
ಸಮಾವೇಶದಲ್ಲಿ ಮೋದಿ ಭಾಷಣ
ಇದನ್ನೂ ಓದಿ: 9 Years of PM Modi : ಅಮೆರಿಕದ ಕಂಪನಿ ಮೋರ್ಗಾನ್ ಸ್ಟಾನ್ಲಿ ಮೋದಿ ಸರ್ಕಾರದ ಬಗ್ಗೆ ಏನು ಹೇಳಿದೆ? ಇಲ್ಲಿದೆ ಪಟ್ಟಿ
“ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಒಂದು ಗ್ಯಾಸ್ ಸಂಪರ್ಕ ಪಡೆಯಲು ಕಚೇರಿಗಳಿಗೆ ಅಲೆಯಬೇಕಿತ್ತು. ಶಿಫಾರಸು ಪತ್ರಗಳನ್ನು ನೀಡಬೇಕಿತ್ತು. ಕಾಂಗ್ರೆಸ್ ಅವಧಿಯಲ್ಲಿ ದೇಶದ 14 ಕೋಟಿ ಜನ ಮಾತ್ರ ಗ್ಯಾಸ್ ಸಂಪರ್ಕ ಪಡೆದಿದ್ದರು. ಆದರೆ, ಕಳೆದ 9 ವರ್ಷದಲ್ಲಿ 19 ಕೋಟಿ ಮನೆಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ಇದು ಮಹಿಳೆಯರ ಆರೋಗ್ಯ ಸುಧಾರಣೆಗೂ ಕಾರಣವಾಗಿದೆ. ಅಷ್ಟೇ ಅಲ್ಲ, ಮನೆ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿದೆ. ಇದೇ ಕೆಲಸವನ್ನು ಕಾಂಗ್ರೆಸ್ ಮಾಡಬೇಕು ಎಂದಿದ್ದರೆ 20 ವರ್ಷ ಬೇಕಾಗುತ್ತಿತ್ತು” ಎಂದರು.