ನವದೆಹಲಿ: ತ್ರಿಪುರದಲ್ಲಿ ಬಹುಮತ ಹಾಗೂ ಮೇಘಾಲಯ ಮತ್ತು ನಾಗಾಲ್ಯಾಂಡ್ ಬಿಜೆಪಿ ಮೈತ್ರಿಕೂಟಗಳಿಗೆ ಮುನ್ನಡೆ ಸಿಕ್ಕ ಹಿನ್ನೆಲೆಯಲ್ಲಿ ಮೂರೂ ರಾಜ್ಯಗಳ ಜನರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಧನ್ಯವಾದ ತಿಳಿಸಿದ್ದಾರೆ. ತ್ರಿಪುರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿದೆ. ನಾಗಾಲ್ಯಾಂಡ್ ಹಾಗೂ ಮೇಘಾಲಯದಲ್ಲಿ ಬಿಜೆಪಿ ಮೈತ್ರಿಕೂಟವೇ ಭಾರಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಹಾಗಾಗಿ, ಮೋದಿ ಅವರು, ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
“ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ನಾಗರಿಕರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಹಾಗೆಯೇ, ಮೂರು ರಾಜ್ಯಗಳ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳು. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರು ನಮಗಿಂತ ಹೆಚ್ಚು ಶ್ರಮ ವಹಿಸುತ್ತಾರೆ. ಹಾಗಾಗಿ, ಅವರಿಗೆ ಹೆಚ್ಚಿನ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಹೇಳಿದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಮನಸ್ಸು ಮಾಡಿದರೆ ಬದಲಾವಣೆ ತರುತ್ತಾರೆ ಎಂಬುದಕ್ಕೆ ಇದೇ ಚುನಾವಣೆ ಸಾಕ್ಷಿಯಾಗಿವೆ. ಮೊದಲು ಈಶಾನ್ಯ ರಾಜ್ಯಗಳ ಕುರಿತು ದೇಶದಲ್ಲಿ ಚರ್ಚೆಯೇ ಆಗುತ್ತಿರಲಿಲ್ಲ. ಚರ್ಚೆ ನಡೆದರೂ, ಅದು ಹಿಂಸಾಚಾರ, ಗುಂಡಿನ ದಾಳಿ ಬಗ್ಗೆಯೇ ಚರ್ಚೆ ಆಗುತ್ತಿತ್ತು. ಆದರೆ, ಈಗ ಈಶಾನ್ಯ ರಾಜ್ಯಗಳು ಅಭಿವೃದ್ಧಿ ವಿಷಯಕ್ಕಾಗಿ ಚರ್ಚೆಯಾಗುತ್ತಿದೆ. ಇದು ಪ್ರಜಾಪ್ರಭುತ್ವದ ಶಕ್ತಿ” ಎಂದು ಕೊಂಡಾಡಿದರು.
ಹೋಗಬೇಡ ಮೋದಿ ಎನ್ನುತ್ತಿದ್ದಾರೆ ಜನ
“ಕೆಲವೊಂದಿಷ್ಟು ಕುತ್ಸಿತ ಮನಸ್ಸಿನವರು ಮರ್ ಜಾ ಮೋದಿ ಎಂದು ಹೇಳುತ್ತಿದ್ದಾರೆ. ಆದರೆ, ಜನ ಮಾತ್ರ ಮತ್ ಜಾ ಮೋದಿ (ಹೋಗಬೇಡಿ ಮೋದಿ) ಎಂದು ಹೇಳುತ್ತಿದ್ದಾರೆ. ಜನ ನಿಂತು ನನ್ನನ್ನು ಬೆಂಬಲಿಸುತ್ತಿರುವಾಗ ಯಾರು ಏನು ಬೇಕಾದರೂ ಹೇಳಲಿ” ಎಂದರು. ಕೆಲ ದಿನಗಳ ಹಿಂದಷ್ಟೇ ಆಪ್ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮರ್ ಜಾ ಮೋದಿ ಎಂದು ಹೇಳಿದ್ದಕ್ಕೆ ತಿರುಗೇಟು ನೀಡಿದರು.
ಮೋದಿ ಮಾತಿನ ಮೋಡಿ
ಈಶಾನ್ಯ ರಾಜ್ಯಗಳು ಮನಸ್ಸಿಗೆ ತುಂಬ ಹತ್ತಿರ
“ಈಶಾನ್ಯ ರಾಜ್ಯಗಳು ದೆಹಲಿಯಿಂದ ದೂರವಿಲ್ಲ ಹಾಗೂ ನಮ್ಮ ಮನಸ್ಸಿನಿಂದ ದೂರವಿಲ್ಲ. ನಾನು ಪ್ರಧಾನಿಯಾದ ಬಳಿಕ 50ಕ್ಕೂ ಅಧಿಕ ಬಾರಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಕೇಂದ್ರದ ಬಿಜೆಪಿ ಸರ್ಕಾರವು ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಇದಕ್ಕಾಗಿಯೇ ಜನ ನಮ್ಮನ್ನು ಬೆಂಬಲಿಸಿದ್ದಾರೆ” ಎಂದರು.
ದೇಶ ಮೊದಲು, ದೇಶವಾಸಿಗಳು ಮೊದಲು
“ತುಂಬ ಜನರಿಗೆ ಬಿಜೆಪಿಯ ಗೆಲುವಿನ ಬಗ್ಗೆ ಕುತೂಹಲ ಮೂಡಿರಬಹುದು. ಇನ್ನೂ ಒಂದಷ್ಟು ಜನ ವಿದ್ಯುನ್ಮಾನ ಮತಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸಿರಬಹುದು. ಆದರೆ, ಬಿಜೆಪಿ ಗೆಲುವಿನ ಗುಟ್ಟನ್ನು ನಾನು ಬಹಿರಂಗಪಡಿಸುತ್ತೇನೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ತತ್ವದ ಆಧಾರದ ಮೇಲೆ ನಾವು ಕೆಲಸ ಮಾಡುತ್ತೇವೆ. ನಾವು ಎಲ್ಲರ ಏಳಿಗೆಗಾಗಿ ಕೆಲಸ ಮಾಡುತ್ತೇವೆ. ನಾವು ಎಲ್ಲರ ಸೇವೆ ಮಾಡುತ್ತೇವೆ. ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬುದು ನಮ್ಮ ಧ್ಯೇಯವಾಗಿದೆ. ನಮಗೆ ದೇಶ ಮೊದಲು, ದೇಶವಾಸಿಗಳು ಮೊದಲು ಎಂಬ ಉದ್ದೇಶವಿದೆ. ಇದಕ್ಕಾಗಿ ಜನ ನಮ್ಮನ್ನು ಗೆಲ್ಲಿಸುತ್ತಾರೆ” ಎಂದು ಹೇಳಿದರು.
“ಸ್ವಾತಂತ್ರ್ಯ ಸಿಕ್ಕು ದಶಕಗಳು ಕಳೆದರೂ ಈಶಾನ್ಯ ರಾಜ್ಯಗಳ ಎಷ್ಟೋ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಹಿಂದಿನ ಸರ್ಕಾರಗಳು ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿರಲಿಲ್ಲ. ಆದರೆ, ನಮ್ಮ ಸರ್ಕಾರವು ಇದನ್ನು ಮಾಡಿತು. ಹಳ್ಳಿ ಹಳ್ಳಿಗಳಿಗೆ ಮೂಲ ಸೌಕರ್ಯಗಳನ್ನು ತಲುಪಿಸಿತು. ಅಭಿವೃದ್ಧಿಯ ಕಾರಣಗಳಿಂದಾಗಿ ಜನ ನಮ್ಮನ್ನು ಗೆಲ್ಲಿಸುತ್ತಿದ್ದಾರೆ. ಇದಕ್ಕೆ ನಮ್ಮ ಕಾರ್ಯಕರ್ತರು ಕೂಡ ಪ್ರಮುಖ ಕಾರಣರಾಗಿದ್ದಾರೆ. ನಮಗೆ ಬೆಂಬಲಿಸಿದ ತ್ರಿಪುರ ಸೇರಿ ಈಶಾನ್ಯ ರಾಜ್ಯಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ. ನಾಗಾಲ್ಯಾಂಡ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಕೂಡ ವಿಧಾನಸಭೆ ಪ್ರವೇಶಿಸುತ್ತಿದ್ದು, ಇದು ನನಗೆ ಹೆಚ್ಚಿನ ಸಂತಸ ತಂದಿದೆ” ಎಂದು ತಿಳಿಸಿದರು.
ಇದನ್ನೂ ಓದಿ: Nagaland Election Result: ನಾಗಾಲ್ಯಾಂಡ್‌ನಲ್ಲಿ ಅಧಿಕಾರ ಉಳಿಸಿಕೊಂಡ ಎನ್‌ಡಿಪಿಪಿ-ಬಿಜೆಪಿ ಮೈತ್ರಿ, ಕಾಂಗ್ರೆಸ್ ಸೊನ್ನೆ