ಪಟನಾ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ತಿರುಗೇಟು ನೀಡಲು ರಚಿಸಿರುವ ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ಗೆ (I.N.D.I.A) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹೊಸ ಪದದ ಮೂಲಕ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಪ್ರತಿಪಕ್ಷಗಳ ಒಕ್ಕೂಟವನ್ನು ‘ಇಂಡಿಯಾ’ ಎಂದು ಕರೆಯಬಾರದು, ಅವರನ್ನು ‘ಘಮಂಡಿಯಾ’ (Ghamandiya) ಎಂದು ಕರೆಯಬೇಕು ಎಂದು ಹೇಳುವ ಮೂಲಕ ಮೋದಿ ಟೀಕಿಸಿದ್ದಾರೆ. ಹಿಂದಿಯಲ್ಲಿ ಘಮಂಡಿಯಾ ಎಂದರೆ ಅಹಂಕಾರಿಗಳು ಎಂದರ್ಥ.
ಬಿಹಾರದಲ್ಲಿ ಎನ್‌ಡಿಎ ಮಿತ್ರಪಕ್ಷಗಳ ನಾಯಕರ ಜತೆ ಮಾತನಾಡಿದ ನರೇಂದ್ರ ಮೋದಿ, ಪ್ರತಿಪಕ್ಷಗಳ ಒಕ್ಕೂಟವನ್ನು ಘಮಂಡಿಯಾ ಎಂಬುದಾಗಿ ಕರೆಯಬೇಕು ಎಂದು ಹೇಳಿದ್ದಾರೆ. ಆ ಮೂಲಕ ಪ್ರತಿಪಕ್ಷಗಳನ್ನು ಜರಿಯಲು ಹೊಸ ಪದವನ್ನು ಅಸ್ತ್ರವನ್ನಾಗಿ ಮಿತ್ರಪಕ್ಷಗಳ ನಾಯಕರಿಗೆ ನೀಡಿದ್ದಾರೆ. ಆದರೆ, ಮೋದಿ ಅವರು ಘಮಂಡಿಯಾ ಪದದ ಸಲಹೆ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಸರಿಯಾದ ಪದ ಪ್ರಯೋಗ ಎಂದು ಬೆಂಬಲಿಸಿದ್ದಾರೆ.
“ಪ್ರತಿಪಕ್ಷಗಳು ಒಗ್ಗೂಡಿ ದೇಶವನ್ನು ಲೂಟಿ ಮಾಡಲು ಹೊರಟಿವೆ. ಬಡವರಿಗೆ ಅವರು ಮಾಡಿದ ಅನ್ಯಾಯ, ಮೋಸವನ್ನು ಮುಚ್ಚಿಕೊಳ್ಳಲು ಯುಪಿಎ ಎಂಬ ಹೆಸರಿನಿಂದ ಇಂಡಿಯಾ ಎಂಬ ಹೆಸರನ್ನು ಮುನ್ನೆಲೆಗೆ ತಂದಿವೆ. ಇಂಡಿಯಾ ಎಂಬ ಪದವನ್ನು ಇವರು ದೇಶಭಕ್ತಿಗಾಗಿ ಇಟ್ಟಿಲ್ಲ. ದೇಶವನ್ನು ಲೂಟಿ ಮಾಡಲು ಇವರು ಇಂತಹ ಹೆಸರಿಟ್ಟಿದ್ದಾರೆ” ಎಂಬುದಾಗಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಟೀಕಿಸಿದ್ದರು.
ಇದನ್ನೂ ಓದಿ: PM Modi : ನರೇಂದ್ರ ಮೋದಿಗೆ ಬುದ್ಧಿ ಹೇಳಿ; ಪ್ರಧಾನಿ ವಿರುದ್ಧ ರಾಷ್ಟ್ರಪತಿಗೆ ದಿನೇಶ್ ಗುಂಡೂರಾವ್ ಪತ್ರ
2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರನ್ನು ಶತಾಯ ಗತಾಯ ಸೋಲಿಸಲು 26 ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಎಂಬ ಒಕ್ಕೂಟವನ್ನು ರಚಿಸಿವೆ. “ಮುಂಬರುವ ಲೋಕಸಭೆ ಚುನಾವಣೆಯು ಬಿಜೆಪಿ ಮತ್ತು ಇಂಡಿಯಾ, ನರೇಂದ್ರ ಮೋದಿ ಮತ್ತು ಇಂಡಿಯಾ, ಬಿಜೆಪಿ ಸಿದ್ಧಾಂತ ಮತ್ತು ಇಂಡಿಯಾ ವಿರುದ್ಧ ನಡುವೆ ನಡೆಯುವ ಸಮರವಾಗಿದೆ. ಭಾರತದ ವಿರುದ್ಧ ನಿಂತವರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ನಿಮಗೆ ಗೊತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.