Site icon Vistara News

Lalu Prasad Yadav: ಮುಂದಿನ ತಿಂಗಳು ಮೋದಿ ರಾಜೀನಾಮೆ; ಲಾಲು ಪ್ರಸಾದ್‌ ಯಾದವ್‌ ಸ್ಫೋಟಕ ಭವಿಷ್ಯ

Lalu Prasad Yadav

Narendra Modi government could fall by August: Lalu Prasad Yadav's big claim

ಪಟನಾ: ಟಿಡಿಪಿ, ಜೆಡಿಯು ಸೇರಿ ಹಲವು ಪಕ್ಷಗಳ ಒಕ್ಕೂಟವಾದ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಿದೆ. ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ನರೇಂದ್ರ ಮೋದಿ ಸರ್ಕಾರ (Narendra Modi Government) ಪತನವಾಗುತ್ತದೆ ಎಂದೇ ಪ್ರತಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಮೊದಲಿಗೆ ಮಮತಾ ಬ್ಯಾನರ್ಜಿ, ನಂತರ ಮಲ್ಲಿಕಾರ್ಜುನ ಖರ್ಗೆ ಅವರು, “ಶೀಘ್ರದಲ್ಲೇ ಮೋದಿ ಸರ್ಕಾರ ಪತನವಾಗುತ್ತದೆ” ಎಂದು ಹೇಳಿದ್ದರು. ಈಗ ಮೋದಿ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಭವಿಷ್ಯ ನುಡಿದಿದ್ದಾರೆ.

“ನರೇಂದ್ರ ಮೋದಿ ಸರ್ಕಾರವು ತುಂಬ ದುರ್ಬಲವಾಗಿದೆ. ಅದು ಆಗಸ್ಟ್‌ನಲ್ಲಿ ಪತನವಾಗುವ ಸಾಧ್ಯತೆ ಇದೆ. ಯಾವಾಗ ಬೇಕಾದರೂ ಮತ್ತೆ ಚುನಾವಣೆ ಘೋಷಣೆಯಾಗಬಹುದು. ಹಾಗಾಗಿ, ಪಕ್ಷದ ಕಾರ್ಯಕರ್ತರು, ಮುಖಂಡರು ಚುನಾವಣೆಗೆ ಸಜ್ಜಾಗಿರಬೇಕು” ಎಂದು ಹೇಳಿದ್ದಾರೆ. ರಾಷ್ಟ್ರೀಯ ಜನತಾದಳದ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಕ್ಷದ ಕಾರ್ಯಕರ್ತರಿಗೆ ಹೀಗೆ ಕರೆ ನೀಡಿದ್ದಾರೆ.

15 ದಿನದಲ್ಲಿ ಪತನ ಎಂದಿದ್ದ ಖರ್ಗೆ

“ದೇಶದ ಜನರು ಬಹುಮತದ ಸರ್ಕಾರವನ್ನು ಆಯ್ಕೆ ಮಾಡಿಲ್ಲ. ಅಲ್ಪಮತದ ಸರ್ಕಾರವು ದೇಶದಲ್ಲಿದೆ. ಆಕಸ್ಮಿಕವಾಗಿ ಬಿಜೆಪಿ ಮೈತ್ರಿಕೂಟವು ಸರ್ಕಾರ ರಚಿಸಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಎನ್‌ಡಿಎ ಮೈತ್ರಿಕೂಟದ ಸರ್ಕಾರವು ಪತನವಾಗಬಹುದು” ಎಂಬುದಾಗಿ ಪಿಟಿಐ ಸುದ್ದಿಸಂಸ್ಥೆಗೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಟಿಡಿಪಿ, ಜೆಡಿಯು, ಎಲ್‌ಜೆಪಿ ಹಾಗೂ ಏಕನಾಥ್‌ ಶಿಂಧೆ ಬಣದ ಶಿವಸೇನೆಯ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಿದೆ.

ಮೊದಲು ಭವಿಷ್ಯ ನುಡಿದಿದ್ದು ಮಮತಾ

ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪತನವಾಗಲಿದೆ ಎಂದು ಮೋದಿ ಪ್ರಮಾಣವಚನ ಸ್ವೀಕರಿಸುತ್ತಲೇ ಟಿಎಂಸಿ ವರಿಷ್ಠ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದರು. “ಯಾರು (ಬಿಜೆಪಿ) 400 ಸೀಟುಗಳ ಬಗ್ಗೆ ಮಾತನಾಡಿದ್ದರೋ, ಅವರಿಗೇ ಈಗ ಬಹುಮತ ಸಿಗದಷ್ಟು ಸ್ಥಾನಗಳು ಲಭಿಸಿವೆ. ಇಂಡಿಯಾ ಒಕ್ಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ ಎಂದ ಮಾತ್ರಕ್ಕೆ ಏನೂ ಆಗುವುದಿಲ್ಲ ಎಂಬುದಾಗಿ ಭಾವಿಸದಿರಿ. ಸಮಯ ಬದಲಾಗುತ್ತದೆ, ಮನಸ್ಥಿತಿಗಳು ಬದಲಾಗುತ್ತವೆ. ಇದರ ಮೇಲೆ ಇಂಡಿಯಾ ಒಕ್ಕೂಟವು ಹೆಚ್ಚು ಗಮನ ಹರಿಸುತ್ತಿದೆ. ಯಾವ ಸರ್ಕಾರವೂ 15 ದಿನದಲ್ಲಿ ಬೇಕಾದರು ಪತನವಾಗಬಹುದು” ಎಂದಿದ್ದರು.

ಇದನ್ನೂ ಓದಿ: Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Exit mobile version