ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ (UPSC Result 2022) ಪ್ರಕಟಿಸಿದ್ದು, ಒಟ್ಟು 933 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಾಮಾನ್ಯ ಕುಟುಂಬದ ಹಿನ್ನೆಲೆಯವರು, ಬಡತನದಲ್ಲೂ ಕಷ್ಟಪಟ್ಟು ಓದಿದವರು ಅತ್ಯುನ್ನತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು, ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ, ಹಿನ್ನಡೆ ಅನುಭವಿಸಿದವರಿಗೂ ಸಾಂತ್ವನದ ಮಾತುಗಳನ್ನಾಡಿದ್ದಾರೆ.
ಪಾಸಾದವರಿಗೆ ಅಭಿನಂದನೆ
“ನಾಗರಿಕ ಸೇವಾ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿಯೇ ಯುವಕರು ದೇಶದ ಅಭಿವೃದ್ಧಿಗಾಗಿ ಆಡಳಿತಾತ್ಮಕ ಸೇವೆಗೆ ಸೇರುತ್ತಿರುವುದು ಖುಷಿ ತಂದಿದೆ. ತೇರ್ಗಡೆಯಾದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು” ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ತೇರ್ಗಡೆಯಾಗದವರಿಗೆ ಸಾಂತ್ವನ
ಹಾಗೆಯೇ, ತೇರ್ಗಡೆಯಾಗದ ಅಭ್ಯರ್ಥಿಗಳಿಗೂ ಮೋದಿ ಸಂದೇಶ ರವಾನಿಸಿದ್ದಾರೆ. “ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಭ್ಯರ್ಥಿಗಳ ನೋವು ನನಗೆ ಅರ್ಥವಾಗುತ್ತದೆ. ಆದರೆ, ನೀವು ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇನ್ನೂ ಹೆಚ್ಚಿನ ಪ್ರಯತ್ನ ಮಾಡಿ. ಇನ್ನೂ ಹೆಚ್ಚಿನ ಅವಕಾಶಗಳು ನಿಮ್ಮ ಕಣ್ಣಮುಂದಿವೆ ಎಂಬುದನ್ನು ಮರೆಯಬೇಡಿ. ನಿಮಗೂ ಶುಭವಾಗಲಿ” ಎಂದು ಮೋದಿ ಸಾಂತ್ವನದ ನುಡಿಗಳನ್ನಾಡಿದ್ದಾರೆ.
ಇದನ್ನೂ ಓದಿ: UPSC Result 2022: ಯುಪಿಎಸ್ಸಿ; ಧಾರವಾಡದ ಸೌರಭ್ ರಾಜ್ಯಕ್ಕೆ 3ನೇ; ರಾಯಚೂರಿನ ಶ್ರವಣ್ ದೇಶಕ್ಕೆ 222ನೇ ರ‍್ಯಾಂಕ್
ಇಶಿತಾ ಕಿಶೋರ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನ ಗರಿಮಾ ಲೋಹಿಯಾ ಎಂಬುವರು ಪಡೆದುಕೊಂಡಿದ್ದರೆ, ಮೂರನೇ ಸ್ಥಾನ ಉಮಾ ಹರತಿ ಎನ್ ಪಾಲಾಗಿದೆ. ಹಾಗೇ, ನಾಲ್ಕನೇ ಸ್ಥಾನ ಸ್ಮೃತಿ ಮಿಶ್ರಾ ಪಾಲಾಗಿದೆ. ಮಯೂರ್ ಹಜಾರಿಯಾ, ಗಹನ್ ನವ್ಯಾ, ವಾಸಿಂ ಅಹ್ದ್ ಭಟ್, ಅನಿರುದ್ಧ ಯಾದವ್, ಕನಿಕಾ ಗೋಯಲ್ ಮತ್ತು ರಾಹುಲ್ ವಾಸ್ತವ್ ಕ್ರಮವಾಗಿ ಐದರಿಂದ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಾರಿಯೂ ಮೊದಲ ನಾಲ್ಕು ಸ್ಥಾನಗಳು ಮಹಿಳಾ ಅಭ್ಯರ್ಥಿಗಳ ಪಾಲಾಗಿದೆ.
ಒಟ್ಟು 1022 ಹುದ್ದೆಗಳ ನೇಮಕಕ್ಕೆ ಈ ಪರೀಕ್ಷೆ ನಡೆಸಲಾಗಿತ್ತು. ಆದರೆ 933 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟು 178 ಅಭ್ಯರ್ಥಿಗಳು ಕಾಯ್ದಿರಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಜನವರಿಯಿಂದ ಮೇ18ರ ವರೆಗೆ ಸಂದರ್ಶನ ನಡೆದಿತ್ತು.