Site icon Vistara News

Narendra Modi : ಪ್ರಧಾನಿ ಮೋದಿಯ 10 ದಿನಗಳ ‘ಭಾರತ ದರ್ಶನ’ ಪ್ರವಾಸದ ಮಾಹಿತಿ ಇಲ್ಲಿದೆ

Narendra Modi

ನವದೆಹಲಿ: ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾರ್ಚ್ 4 ರಿಂದ ಆರಂಭಗೊಂಡಂತೆ 13ರವರೆಗೆ ದೇಶಾದ್ಯಂತ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 10 ದಿನಗಳ ಭೇಟಿ ನೀಡಲಿದ್ದಾರೆ. ಒಟ್ಟು 29 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.

ವೇಳಾಪಟ್ಟಿಯ ಪ್ರಕಾರ, ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election) ಮುಂಚಿತವಾಗಿ ಮೋದಿ ಮುಂದಿನ 10 ದಿನಗಳಲ್ಲಿ ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ಮೋದಿ ಅವರ 10 ದಿನಗಳ ಭೇಟಿ ಇಲ್ಲಿದೆ

ಮಾರ್ಚ್ 4: ಮೋದಿ ತೆಲಂಗಾಣಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ಅದಿಲಾಬಾದ್ ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅದೇ ರೀತಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಂದ ಅವರು ತಮಿಳುನಾಡಿನ ಕಲ್ಪಕ್ಕಂಗೆ ತೆರಳಲಿದ್ದು, ಅಲ್ಲಿ ಅವರು ಭಾರತೀಯ ನಭಿಕಿಯಾ ವಿದ್ಯುತ್ ನಿಗಮ್ ಲಿಮಿಟೆಡ್ (ಭವಿನಿ) ಗೆ ಭೇಟಿ ನೀಡಲಿದ್ದಾರೆ. ಚೆನ್ನೈನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಅವರು ಹೈದರಾಬಾದ್ ಗೆ ಮರಳುತ್ತಾರೆ.

ಮಾರ್ಚ್ 5: ಎರಡನೇ ದಿನ, ಅವರು ತೆಲಂಗಾಣದ ಸಂಗಾರೆಡ್ಡಿಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಂತರ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಅಲ್ಲಿಂದ ಒಡಿಶಾಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಚಂಡಿಖೋಲೆಯಲ್ಲಿ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಬಳಿಕ ಜೈಪುರದ ಚಂಡಿಖೋಲೆಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ.

ಮಾರ್ಚ್ 6: ಬುಧವಾರ ಮೋದಿ ಅವರು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ 15,400 ಕೋಟಿ ರೂ.ಗಳ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬರಾಸತ್​ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಂದ ಬಿಹಾರಕ್ಕೆ ತೆರಳಲಿದ್ದಾರೆ.

ಇದನ್ನೂ ಓದಿ : ಈ ಬಾರಿ ಟಿಕೆಟ್ ಕೊಡದ ಮೋದಿ ಬಗ್ಗೆ ಸಾಧ್ವಿ ಪ್ರಜ್ಞಾ ಠಾಕೂರ್ ಹೇಳಿದ್ದೇನು?

ಮಾರ್ಚ್ 7: 4 ನೇ ದಿನದಂದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 2019 ರ ಆಗಸ್ಟ್​​ನಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಇದು ಕಾಶ್ಮೀರ ಕಣಿವೆಗೆ ಪ್ರಧಾನಿ ಮೋದಿಯವರ ಮೊದಲ ಭೇಟಿ. ನಂತರ ಅವರು ನವದೆಹಲಿಯಲ್ಲಿ ಮಾಧ್ಯಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್ 8: ಪ್ರವಾಸದ 5 ನೇ ದಿನ ಮೋದಿ ದೆಹಲಿಯಲ್ಲಿ ಮೊದಲ ನ್ಯಾಷನಲ್​ ಕ್ರಿಯೇಟರ್ಸ್​ ಅವಾರ್ಡ್​ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನು ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ಸಂಚಿಕೆಯಲ್ಲಿ ಘೋಷಿಸಿದ್ದರು. ಸಂಜೆ ಅಸ್ಸಾಂಗೆ ಪ್ರಯಾಣಿಸಲಿದ್ದಾರೆ.

ಮಾರ್ಚ್ 9: ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿರುವ ಮೋದಿ ಅವರು ಪಶ್ಚಿಮ ಕಾಮೆಂಗ್​​ನಲ್ಲಿ ಸೆಲಾ ಸುರಂಗವನ್ನು ಉದ್ಘಾಟಿಸಲಿದ್ದಾರೆ. ರಾಜಧಾನಿ ಇಟಾನಗರದಲ್ಲಿ ನಡೆಯುಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅಸ್ಸಾಂಗೆ ತೆರಳಲಿದ್ದು, ಅಲ್ಲಿ ಅವರು ಜೋಹರತ್​​ನಲ್ಲಿ ಲಚಿತ್ ಬರ್ಫುಕನ್ ಅವರ ಪ್ರತಿಮೆ (ಮೊಘಲರ ವಿರುದ್ಧ ಹೋರಾಡಿದ ರಾಜಾ ರಾಮ್​ ಸಿಂಗ್​ನ ದಂಡನಾಯಕ) ಅನಾವರಣಗೊಳಿಸಲಿದ್ದಾರೆ. ಅಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ, ಪಿಎಂ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು ಸಿಲಿಗುರಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.

ಮಾರ್ಚ್ 10: ಸಮಾಜವಾದಿ ಪಕ್ಷದ ಭದ್ರಕೋಟೆಯಾದ ಅಜಂಗಢದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಮುಂದಿನ ಭಾನುವಾರ ಉತ್ತರ ಪ್ರದೇಶಕ್ಕೆ ಪ್ರಯಾಣಿಸಲಿದ್ದಾರೆ. ಪ್ರಧಾನಿ ಭೇಟಿಗೆ ಮುಂಚಿತವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಮಾರ್ಚ್ 11: 8 ನೇ ದಿನ, ಪ್ರಧಾನಿ ಮೋದಿ ‘ನಮೋ ಡ್ರೋನ್ ದೀದಿ’ ಮತ್ತು ‘ಲಖ್ಪತಿ ದೀದಿ’ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ಆಗಮಿಸಲಿದ್ದಾರೆ. ನಂತರ, ಅವರು ದ್ವಾರಕಾ ಎಕ್ಸ್ ಪ್ರೆಸ್ ವೇಯ ಹರಿಯಾಣ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಅಂದು ಸಂಜೆ ಪ್ರಧಾನಮಂತ್ರಿಯವರು ಡಿಆರ್ ಡಿಒ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್ 12: 9ನೇ ದಿನ ಪ್ರಧಾನಿ ಮೋದಿ ಗುಜರಾತ್​ನ ಸಾಬರಮತಿಗೆ ಭೇಟಿ ನೀಡಲಿದ್ದು, ನಂತರ ರಾಜಸ್ಥಾನಕ್ಕೆ ತೆರಳಿ ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್ ಪ್ರವಾಸ ಕೈಗೊಳ್ಳಲಿದ್ದಾರೆ.

ಮಾರ್ಚ್ 13: ತಮ್ಮ ಪ್ರವಾಸದ ಕೊನೇ ಹಂತದಲ್ಲಿ ಮೋದಿ ಗುಜರಾತ್ ಮತ್ತು ಅಸ್ಸಾಂನಲ್ಲಿ ಮೂರು ಅರೆವಾಹಕ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ.

Exit mobile version