ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿದೆ. ಅದರಲ್ಲೂ, ನಿತ್ಯ ಸೋಂಕಿತರ ಸಂಖ್ಯೆಯು ಸಾವಿರ ದಾಟುತ್ತಿರುವ ಕಾರಣ ಆತಂಕ ಹೆಚ್ಚಾಗಿದೆ. ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಅತ್ತ, ಎಚ್3ಎನ್2 ಇನ್‌ಫ್ಲುಯೆಂಜಾ ಪ್ರಕರಣಗಳೂ ಜಾಸ್ತಿಯಾಗುತ್ತಿವೆ. ಇದರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು (Narendra Modi Meeting) ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದ್ದು, ಸೋಂಕಿನ ನಿಗ್ರಹಕ್ಕೆ ಹತ್ತಾರು ಕ್ರಮಗಳನ್ನು ಸೂಚಿಸಿದ್ದಾರೆ.
“ದೇಶದಲ್ಲಿ ಕೊರೊನಾ ನಿಗ್ರಹಿಸುವ ದಿಸೆಯಲ್ಲಿ ಎಲ್ಲ ರಾಜ್ಯಗಳಲ್ಲಿ ಲ್ಯಾಬ್ ತಪಾಸಣೆಗಳನ್ನು ಹೆಚ್ಚಿಸಬೇಕು. ಕೊರೊನಾ ಪಾಸಿಟಿವ್ ಬಂದವರ ಮಾದರಿಯನ್ನು ಕಡ್ಡಾಯವಾಗಿ ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು, ಹೊಸ ತಳಿಗಳು ಅಥವಾ ಉಪ ತಳಿಗಳ ಹರಡುವಿಕೆ ಮೇಲೂ ನಿಗಾ ಇಡಬೇಕು. ಮೇಲಾಗಿ ಇವುಗಳನ್ನು ಪತ್ತೆ ಹಚ್ಚಬೇಕು. ಪಾಸಿಟಿವಿಟಿ ಪ್ರಮಾಣ ಹೆಚ್ಚಿರುವ ರಾಜ್ಯಗಳಲ್ಲಿ ತಪಾಸಣೆ ಹೆಚ್ಚಿಸುವ ಕುರಿತು ಕ್ರಮ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು” ಎಂಬುದು ಸೇರಿ ಮೋದಿ ಅವರು ಹಲವು ಸೂಚನೆ ನೀಡಿದ್ದಾರೆ.
ಹಾಗೆಯೇ, ಎಚ್3ಎನ್2 ಸೋಂಕಿನ ಮೇಲೆಯೂ ನಿಗಾ ಇಡಬೇಕು. ಕೊರೊನಾ ಹಾಗೂ ಎಚ್3ಎನ್2 ನಿಗ್ರಹದ ದೃಷ್ಟಿಯಿಂದ ಆರೋಗ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಎಲ್ಲ ಕ್ರಮ ತೆಗೆದುಕೊಳ್ಳಬೇಕು. ಕೊರೊನಾ ನಿರೋಧಕ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಬೇಕು. ಎರಡು ಡೋಸ್ ಪಡೆದವರಿಗೆ ಬೂಸ್ಟರ್ ಡೋಸ್ ನೀಡಬೇಕು. ಇವುಗಳ ಜತೆಗೆ ಜನರು ಸಾಮಾಜಿಕ ಅಂತರ ಕಾಪಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಸೇರಿ ವಿವಿಧ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು” ಎಂಬುದಾಗಿ ನಿರ್ದೇಶನ ನೀಡಿದ್ದಾರೆ.
ನರೇಂದ್ರ ಮೋದಿ ಸಭೆ
ದೇಶದಲ್ಲಿ ಬುಧವಾರ ಒಂದೇ ದಿನ 1,134 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 7026ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಕೊವಿಡ್ 19 ಸೋಂಕಿತರ ಒಟ್ಟು ಸಂಖ್ಯೆ 4,46,98,118ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಕೇಸ್ಗಳ ಸಂಖ್ಯೆ, ಒಟ್ಟಾರೆ ಸೋಂಕಿತರ ಸಂಖ್ಯೆಯ ಶೇ. 0.02ರಷ್ಟಿದೆ. ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.
ದೇಶದಲ್ಲಿ ಕೊರೊನಾ ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.1.09ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್ 0.98ರಷ್ಟಿದೆ. ಸೋಂಕಿನಿಂದ ಮೃತಪಡುತ್ತಿರುವವರ ರೇಟ್ ಶೇ.1.19ರಷ್ಟಿದೆ. ಕಳೆದ 24ಗಂಟೆಯಲ್ಲಿ ಕೊರೊನಾದಿಂದ ಐದು ಸಾವಾಗಿದ್ದು, ಅದರಲ್ಲಿ ಛತ್ತೀಸ್ಗಢ, ದೆಹಲಿ, ಗುಜರಾತ್, ಮಹಾರಾಷ್ಟ್ರ ಮತ್ತು ಕೇರಳಾದಿಂದ ತಲಾ ಒಂದು ಸಾವು ವರದಿಯಾಗಿದೆ. ಒಟ್ಟಾರೆ ಸಾವಿನ ಸಂಖ್ಯೆ 5,30,813ಕ್ಕೆ ತಲುಪಿದೆ. ಇದುವರೆಗೆ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 4,41,60,279ಆಗಿದ್ದು, ಚೇತರಿಕೆ ರೇಟ್ ಶೇ. 98.80ರಷ್ಟಿರುವುದು ತುಸು ಸಮಾಧಾನಕರ ಸಂಗತಿಯಾಗಿದೆ.
ಇದನ್ನೂ ಓದಿ: Covid 19 Cases: ನಿಧಾನವಾಗಿ ಹೆಚ್ಚುತ್ತಿದೆ ಕೊರೊನಾ; 24ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಕೇಸ್ಗಳು ಪತ್ತೆ, 5ಮಂದಿ ಸಾವು