Site icon Vistara News

Narendra Modi: ಕಾಜಿರಂಗ ಅಭಯಾರಣ್ಯದಲ್ಲಿ ರಾತ್ರಿ ಕಳೆಯುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ ಮೋದಿ; ಅದೇನು?

modi

modi

ದಿಸ್‌ಪುರ್‌: ಎರಡು ದಿನಗಳ ಭೇಟಿಗಾಗಿ ಅಸ್ಸಾಂಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಹೊಸದೊಂದು ಇತಿಹಾಸ ಬರೆಯಲಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (Kaziranga National Park) ಅವರು ಇಂದು ಉಳಿಯಲಿದ್ದಾರೆ. ಆ ಮೂಲಕ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ತಂಗಿದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಮೋದಿ 18,000 ಕೋಟಿ ರೂ.ಗಳ ಯೋಜನೆಯ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಕಾಜಿರಂಗದ ಕಹ್ರಾದಲ್ಲಿರುವ ಅಸ್ಸಾಂ ಪೊಲೀಸ್ ಅತಿಥಿ ಗೃಹದಲ್ಲಿ ರಾತ್ರಿ ಕಳೆಯಲಿದ್ದು, ಅದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು 2022ರಲ್ಲಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ʼʼಅಸ್ಸಾಂಗೆ ಅತಿ ಹೆಚ್ಚು ಬಾರಿ ಭೇಟಿ ನೀಡಿದ ಏಕೈಕ ಪ್ರಧಾನಿ ಮೋದಿʼʼ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ.

ಸಿದ್ಧತೆ ಪೂರ್ಣ

ʼʼಮೋದಿ ಅವರು ತಂಗುವ ಹಿನ್ನಲೆಯಲ್ಲಿ ಕಾಜಿರಂಗದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಎನ್ಎಸ್‌ಜಿಗಳು ಮತ್ತು ಭದ್ರತಾ ಸಿಬ್ಬಂದಿ ಸುರಕ್ಷತೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಶನಿವಾರ (ಮಾರ್ಚ್‌ 9) ಪ್ರಧಾನಿ ಜಂಗಲ್ ಸಫಾರಿ ಕೈಗೊಳ್ಳಲಿದ್ದು, ಅಧಿಕಾರಿಗಳು ಜೀಪ್ ಮತ್ತು ಆನೆ ಸಫಾರಿ ಎರಡಕ್ಕೂ ವ್ಯವಸ್ಥೆ ಮಾಡಲಿದ್ದಾರೆ. ಅವರು ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ಇರುತ್ತಾರೆ” ಎಂದು ಮೂಲಗಳು ತಿಳಿಸಿವೆ.

ʼʼತಮ್ಮ ಪ್ರವಾಸದ ಸಮಯದಲ್ಲಿ ಮೋದಿ ಬರೌನಿಯಿಂದ ಗುವಾಹಟಿಗೆ ತೆರಳುವ 3,992 ಕೋಟಿ ರೂ.ಗಳ ಪೈಪ್‌ಲೈನ್‌ ಯೋಜನೆ ಸೇರಿದಂತೆ ಅಸ್ಸಾಂ ಮತ್ತು ಕೇಂದ್ರ ಸರ್ಕಾರ ಕೈಗೊಂಡ 18,000 ಕೋಟಿ ರೂ.ಗಳ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈಶಿಷ್ಟ್ಯ

ಕಾಜಿರಂಗ ರಾಷ್ಟ್ರೀಯ ಉದ್ಯಾನವು ಒಂಟಿ ಕೊಂಬಿನ ಘೇಂಡಾಮೃಗಗಳಿಗೆ ಹೆಸರು ವಾಸಿ. 429.69 ಚದರ ಕಿಲೋಮೀಟರ್‌ ವಿಸ್ತೀರ್ಣ ಹೊಂದಿರುವ ಇದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿದೆ. ವಿಶ್ವದಲ್ಲಿರುವ ಒಂಟಿ ಕೊಂಬಿನ ಘೇಂಡಾಮೃಗಗಳಲ್ಲಿ ಮೂರನೇ ಎರಡು ಭಾಗದಷ್ಟು ಘೇಂಡಾಮೃಗಗಳು ಇದೇ ರಾಷ್ಟ್ರೀಯ ಉದ್ಯಾನದಲ್ಲಿವೆ. ಆನೆ, ಕರಡಿ ಹಾಗೂ ಚಿರತೆಗಳಿಗೂ ಕಾಜಿರಂಗ ಅಭಯಾರಣ್ಯವು ಆಶ್ರಯ ತಾಣವಾಗಿದೆ. ಈ ಉದ್ಯಾನದಲ್ಲಿ ಸಫಾರಿಗೆ ತೆರಳಲು 3,500-4,500 ರೂ. ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಜೊತೆಗಿನ ಸೆಲ್ಫಿ ನಂತರ ಟ್ರೆಂಡ್ ಆದ ನಜೀಮ್‌; ಯಾರಿವನು?

ಶನಿವಾರ ಬೆಳಗ್ಗೆ ಸುಮಾರು 5.30ಕ್ಕೆ ಮೋದಿ ಕಾಜಿರಂಗಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಅವರ ಈ ಭೇಟಿಯು ಗಮನ ಸೆಳೆಯಲಿದೆ ಮತ್ತು ಭವಿಷ್ಯದಲ್ಲಿ ಪ್ರವಾಸಿ ಆಕರ್ಷಣೆಯ ತಾಣವಾಗಲಿದೆ ಎಂಬ ಲೆಕ್ಕಾಚಾರವಿದೆ. “ನಾವು ಪ್ರಧಾನಿ ಅವರ ಭೇಟಿಗಾಗಿ ಕುತೂಹಲದಿಂದ ಕಾಯುತ್ತಿದ್ದೇವೆ. ಪಿಎಂ ಅವರ ಭೇಟಿಯು ಕಾಜಿರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲಿದೆ ಎಂಬ ಭರವಸೆ ಇದೆ” ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version