ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ನಡುವಿನ ವಿಶೇಷ ನಂಟು, ಕಲೆ, ಆಚಾರ, ವಿಚಾರ, ಸಂಸ್ಕೃತಿಯಲ್ಲಿರುವ ಸಮಾನ ಅಂಶಗಳು, ಪುರಾತನ ಬೆಸುಗೆ ಕುರಿತು ಅರಿಯುವ, ಅಧ್ಯಯನ ನಡೆಸುವ, ಇತಿಹಾಸಕ್ಕೆ ಎಡತಾಕುವ ವಿಶೇಷ “ಕಾಶಿ ತಮಿಳು ಸಂಗಮಂ”ಗೆ (Kashi Tamil Sangamam) ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿಯಲ್ಲಿ ಚಾಲನೆ ನೀಡಿದ್ದಾರೆ.
ಕಾಶಿ ತಮಿಳು ಸಂಗಮಂಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, “ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತವು ವಿಭಿನ್ನ, ವಿಶೇಷ ನಂಟು, ಬೆಸುಗೆ ಹೊಂದಿವೆ. ಕಾಶಿ ಹಾಗೂ ತಮಿಳುನಾಡು ಶಿವಮಯವಾಗಿವೆ, ಶಕ್ತಿಮಯವಾಗಿವೆ. ಹಾಗೆ ನೋಡಿದರೆ, ಕಾಶಿ ಅಭಿವೃದ್ಧಿಗೆ ತಮಿಳುನಾಡಿನ ಕೊಡುಗೆ ಅಪಾರವಾಗಿದೆ. ಬನಾರಸ್ ಹಿಂದು ವಿವಿ ಕುಲಪತಿಯಾಗಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಹಲವು ಬದಲಾವಣೆಗೆ ಸಾಕ್ಷಿಯಾಗಿದ್ದಾರೆ” ಎಂದು ಸ್ಮರಿಸಿದರು.
ಏನಿದು ಕಾಶಿ ತಮಿಳು ಸಂಗಮಂ?
ದಕ್ಷಿಣ ಹಾಗೂ ಉತ್ತರ ಭಾರತದ ಬೆಸುಗೆ ಕುರಿತು ಅಧ್ಯಯನ, ಚಿಂತನ ಮಂಥನ ನಡೆಸುವ ವಿಶೇಷ ಕಾರ್ಯಕ್ರಮವೇ ಕಾಶಿ ತಮಿಳು ಸಂಗಮಂ ಆಗಿದೆ. ನವೆಂಬರ್ 19ರಿಂದ 30 ದಿನಗಳವರೆಗೆ ಈ ಮಹಾ ಸಂಗಮ ಕಾರ್ಯಕ್ರಮ ನಡೆಯಲಿದ್ದು, ತಮಿಳುನಾಡಿನ 2,500ಕ್ಕೂ ಹೆಚ್ಚಿನ ಗಣ್ಯರು ಕಾಶಿಯಲ್ಲಿ ಬೀಡುಬಿಟ್ಟಿದ್ದಾರೆ.
ಸಾಹಿತಿಗಳು, ವ್ಯಾಪಾರಿಗಳು, ಬುದ್ಧಿಜೀವಿಗಳು, ಸ್ಕಾಲರ್‌ಗಳು, ವೃತ್ತಿಪರರು, ಕಲಾವಿದರು ಸೇರಿ ತಮಿಳುನಾಡಿನ ವಿಶೇಷ 12 ತಂಡಗಳು ಕಾಶಿಯಲ್ಲಿವೆ. ಇವರು ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಾಗರಿಕತೆ, ಸಾಹಿತಿ, ಸಂಸ್ಕೃತಿ, ಜ್ಞಾನಸಂಪತ್ತು ಸೇರಿ ಹತ್ತಾರು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಒಂದು ತಿಂಗಳವರೆಗೆ ಕರಕುಶಲ ವಸ್ತುಗಳು, ಪುಸ್ತಕ, ಡಾಕ್ಯುಮೆಂಟರಿ, ಇತಿಹಾಸ, ಪ್ರವಾಸೋದ್ಯಮ ಮಾಹಿತಿ, ವಿಚಾರಗೋಷ್ಠಿ, ಉತ್ಸವ ಸೇರಿ ಹತ್ತಾರು ಕಾರ್ಯಕ್ರಮ, ಚಟುವಟಿಕೆ ನಡೆಯಲಿವೆ.
ಇದನ್ನೂ ಓದಿ | Dev Deepavali | ದೇವ್ ದೀಪಾವಳಿ ಹಿನ್ನೆಲೆ ಕಾಶಿಯ ಅದ್ಭುತ ಚಿತ್ರಗಳ ಶೇರ್ ಮಾಡಿದ ಮೋದಿ, ಇಲ್ಲಿವೆ ನೋಡಿ