Site icon Vistara News

Ram Mandir: ನಿಮ್ಮ ಚಿಂತನೆ ಮರುಪರಿಶೀಲಿಸಿ; ಮಂದಿರ ವಿರೋಧಿಗಳಿಗೆ ಮೋದಿ ಆಹ್ವಾನ

Narendra Modi

PM Narendra Modi To Lay Foundation Stone of Shri Kalki Dham Temple in Uttar Pradesh Today

ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾದ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸಲಾಗಿದೆ. ಸುಮಾರು 7 ಸಾವಿರ ಗಣ್ಯರ ಮಧ್ಯೆ ರಾಮಮಂದಿರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಬಳಿಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಅಷ್ಟೇ ಅಲ್ಲ, ರಾಮಮಂದಿರಕ್ಕೆ ಬನ್ನಿ ಎಂದು ಪ್ರತಿಪಕ್ಷಗಳ ನಾಯಕರು ಹಾಗೂ ಮಂದಿರ ವಿರೋಧಿಗಳಿಗೂ ಆಹ್ವಾನ ನೀಡಿದರು.

“ರಾಮಮಂದಿರ ನಿರ್ಮಿಸಿದರೆ ದೇಶದಲ್ಲಿ ಬೆಂಕಿ ಹೊತ್ತಿ ಉರಿಯುತ್ತದೆ ಎಂದು ಒಂದಷ್ಟು ಜನ ಹೇಳುತ್ತಿದ್ದರು. ಆದರೆ, ರಾಮಮಂದಿರ ನಿರ್ಮಾಣದಿಂದ ಬೆಂಕಿ ಹೊತ್ತಿ ಉರಿಯುವುದಿಲ್ಲ. ಬದಲಾಗಿ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸುತ್ತದೆ. ದೇಶದ ಏಳಿಗೆ ಹೊಸ ಶಕ್ತಿಯೊಂದು ಉದ್ಭವವಾಗುತ್ತದೆ. ಹಾಗಾಗಿ, ರಾಮಮಂದಿರವನ್ನು ವಿರೋಧಿಸುವವರು ಈಗ ರಾಮಮಂದಿರಕ್ಕೆ ಆಗಮಿಸಬೇಕು. ಅವರು ತಮ್ಮ ಮನೋಭಾವವನ್ನು ಮರು ಪರಿಶೀಲಿಸಿಕೊಳ್ಳಬೇಕು. ಚಿಂತನೆಗಳನ್ನು ಬದಲಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.

“ರಾಮ ವಿವಾದ ಅಲ್ಲ, ಸಮಾಧಾನ. ರಾಮ ವರ್ತಮಾನ ಅಲ್ಲ ಅನಂತ ಕಾಲ. ರಾಮ ಎಲ್ಲರಿಗೂ ಸೇರಿದವನು. ಇದು ಕೇವಲ ವಿಗ್ರಹದ ಪ್ರಾಣ ಪ್ರತಿಷ್ಠೆ ಅಲ್ಲ. ಸಾಕ್ಷಾತ್‌ ಭಾರತೀಯರ ಮಾನವೀಯ ಮೌಲ್ಯದ, ಸರ್ವೋಚ್ಚ ಆದರ್ಶದ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಇದು ಕೇವಲ ದೇವ ಮಂದಿರ ಅಲ್ಲ, ಭಾರತದ ದೃಷ್ಟಿಯ, ಭಾರತದ ದರ್ಶನದ ಮಂದಿರ. ರಾಷ್ಟ್ರ ಚೇತನ ಮಂದಿರ.ರಾಮ ಪ್ರವಾಹ, ಪ್ರಭಾವ. ರಾಮ ನಿತ್ಯ ನಿರಂತರ. ರಾಮ ವಿಶ್ವಾತ್ಮ. ಕಾಲ ಚಕ್ರ ಬದಲಾಗಿದೆ. ಮುಂದಿನ ಸಾವಿರ ಸಾವಿರ ವರ್ಷಗಳ ಕಾಲ ಈ ಸಂಭ್ರಮ ಮುಂದುವರಿಯಲಿದೆ. ಇದು ಸರಿಯಾದ ಸಮಯ. ಇದು ಪವಿತ್ರ ಸಮಯ. ಮುಂದಿನ ಸಾವಿರ ವರ್ಷಗಳ ಭವಿಷ್ಯಕ್ಕೆ ನಾವೀಗ ಮುನ್ನುಡಿ ಬರೆಯಬೇಕು. ಭವ್ಯ ದಿವ್ಯ ಭಾರತದ ನಿರ್ಮಾಣಕ್ಕೆ ಪ್ರಮಾಣ ತೆಗೆದುಕೊಳ್ಳಬೇಕು” ಎಂದು ಕರೆ ನೀಡಿದರು.

“ಇಂತಹ ಶುಭ ಘಳಿಗೆಯಲ್ಲಿ ದೇಶದ ಸಮಸ್ತ ಜನರಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ಈಗಷ್ಟೇ ನಾನು ಪ್ರಾಣಪ್ರತಿಷ್ಠೆ ಬಳಿಕ ನಿಮ್ಮ ಎದುರು ಬಂದು ನಿಂತಿದ್ದೇನೆ. ನಿಮ್ಮ ಜತೆ ನಾನು ಅಸಂಖ್ಯ ವಿಚಾರಗಳನ್ನು ಹೇಳಬೇಕು. ಆದರೆ, ನಾನು ಪದಗಳೇ ಇಲ್ಲದಂತಾಗಿದ್ದೇನೆ. ಈಗಲೂ ನನ್ನ ದೇಹ, ಮನಸ್ಸು ರಾಮನೊಂದಿಗೆ ವಿಲೀನವಾಗಿದೆ. ಈಗ ನಮ್ಮ ರಾಮಲಲ್ಲಾ ಟೆಂಟ್‌ನಲ್ಲಿ ಇರುವುದಿಲ್ಲ. ಇಂತಹ ಭವ್ಯ ರಾಮಮಂದಿರದಲ್ಲಿ ರಾಮನು ವಿರಾಜಮಾನನಾಗಿದ್ದಾನೆ” ಎಂದು ಹೇಳಿದರು.

ಇದನ್ನೂ ಓದಿ: Ram Mandir: ಇದು ರಾಮಮಂದಿರ ಅಷ್ಟೇ ಅಲ್ಲ, ರಾಷ್ಟ್ರಮಂದಿರ: ಪ್ರಾಣ ಪ್ರತಿಷ್ಠೆ ಬಳಿಕ ಮೋದಿ ಭಾವುಕ ನುಡಿ

“ವಿಶ್ವದ ಮೂಲೆಮೂಲೆಯಲ್ಲಿರುವ ಪ್ರತಿಯೊಬ್ಬ ರಾಮ ಭಕ್ತರಿಗೆ ಖುಷಿಯಾಗಿದೆ. ಈ ಕ್ಷಣವು ಪವಿತ್ರವಾಗಿದೆ. ಎಲ್ಲ ಸಂತಸ, ಸಂಭ್ರಮದ ಹಿಂದೆ ಪ್ರಭು ಶ್ರೀರಾಮನ ಆಶೀರ್ವಾದ ಇದೆ. 2024ರ ಜನವರಿ 22 ಕೇವಲ ಒಂದು ದಿನಾಂಕವಲ್ಲ. ಇದು ಹೊಸ ಮನ್ವಂತರಕ್ಕೆ ಸಾಕ್ಷಿಯಾಗಲಿದೆ. ಕ್ಯಾಲೆಂಡರ್‌ನಲ್ಲಿ ಈ ದಿನಾಂಕ ಚಿರಸ್ಥಾಯಿಯಾಗಲಿದೆ. ದೇಶದಲ್ಲಿ ಹೊಸ ವಿಶ್ವಾಸದ ಬುಗ್ಗೆ ಇದೆ. ಇಂತಹ ವಿಶ್ವಾಸದ ಸಾಕ್ಷಿಯಾಗಿ ರಾಮಮಂದಿರ ನಮ್ಮ ಕಣ್ಣಮುಂದಿದೆ” ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version