Site icon Vistara News

Narendra Modi: ಎಲ್ಲ ಗ್ಯಾರಂಟಿಗಳ ಜಾರಿಗೂ ಮೋದಿಯೇ ಗ್ಯಾರಂಟಿ; ಪ್ರಧಾನಿ ಅಬ್ಬರದ ಭಾಷಣ

Narendra Modi

Narendra Modi Is Guarantee For All Guarantees; Says Prime Minister In Bhopal

ಭೋಪಾಲ್‌: ಒಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗ್ಯಾರಂಟಿ ಹೆಸರಿನಲ್ಲಿಯೇ ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಕಾರ್ಯಕರ್ತ ಮಹಾಕುಂಭದಲ್ಲಿ (Karyakarta Mahakumbh) ಪಾಲ್ಗೊಂಡ ಅವರು, “ದೇಶದಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲು ಮೋದಿಯೇ ಗ್ಯಾರಂಟಿ” ಎಂದಿದ್ದಾರೆ.

ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ. ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. “ದೇಶದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ವಿಧೇಯಕ ಮಂಡಿಸಿ, ಅಂಗೀಕಾರ ಪಡೆದಿದೆ. ಇದು ದೇಶದಲ್ಲಿಯೇ ಮಹಿಳಾ ಸಬಲೀಕರಣಕ್ಕಾಗಿ ತೆಗೆದುಕೊಂಡ ಐತಿಹಾಸಿಕ ತೀರ್ಮಾನವಾಗಿದೆ. ಆದರೆ, ಕಳೆದ 30 ವರ್ಷದಿಂದ ಮಹಿಳಾ ಮೀಸಲಾತಿ ಭರವಸೆ ನೀಡಿತೇ ಹೊರತು, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾವು ಮಾತ್ರ ಮಹಿಳಾ ಸಬಲೀಕರಣದ ಗ್ಯಾರಂಟಿ ಜಾರಿಗೆ ತಂದಿದ್ದೇವೆ” ಎಂದು ಹೇಳಿದರು.

ಕಾಂಗ್ರೆಸ್‌ಗೆ ನಿಯತ್ತಿಲ್ಲ ಎಂದ ಮೋದಿ

“ಮಹಿಳಾ ಮೀಸಲಾತಿ ಜಾರಿಗೆ ತರಲು ಕಾಂಗ್ರೆಸ್‌ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದೆ. ಕಾಂಗ್ರೆಸ್‌ಗೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಮೊದಲೇ ಜಾರಿಗೆ ತರುತ್ತಿತ್ತು. 30 ವರ್ಷದಿಂದ ಸುಳ್ಳು ಹೇಳಿದ ಕಾಂಗ್ರೆಸ್‌ ಈಗ ವಿಧೇಯಕಕ್ಕೆ ಬೆಂಬಲ ಸೂಚಿಸಿದೆ. ಇಲ್ಲೂ ಕಾಂಗ್ರೆಸ್‌ ಬಳಿ ನಿಯತ್ತಿಲ್ಲ. ದೇಶದ ಸಹೋದರಿಯರು, ಮಾತೆಯರ ಭಯದಿಂದ ಅಂಗೀಕಾರ ನೀಡಿದೆ. ಆದರೆ, ದೇಶದಲ್ಲಿ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತರಲು ನಿಮ್ಮ ಮುಂದಿರುವ ಮೋದಿಯೇ ಗ್ಯಾರಂಟಿ” ಎಂದು ಹೇಳಿದರು.

“ವರ್ಷಗಳವರೆಗೆ ದೇಶವನ್ನು ಆಳಿದ ಕಾಂಗ್ರೆಸ್‌ಗೆ ದೇಶಾದ್ಯಂತ ಶೌಚಾಲಯ ನಿರ್ಮಿಸಬೇಕು ಎಂಬ ಕನಿಷ್ಠ ಕಾಳಜಿಯೂ ಇರಲಿಲ್ಲ. ಮಹಿಳೆಯರಿಗೆ ಕನಿಷ್ಠ ಒಂದು ಬ್ಯಾಂಕ್‌ ಖಾತೆ ಇರಲಿಲ್ಲ. ದೇಶಾದ್ಯಂತ ಶೌಚಾಲಯಗಳನ್ನು ನಿರ್ಮಿಸಲು, ಬ್ಯಾಂಕ್‌ ಖಾತೆ ತೆರೆಯಲು ಮೋದಿಯೇ ಬರಬೇಕಾಯಿತು. ಏಕೆಂದರೆ, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್‌ಗೆ ನಿಯತ್ತು ಇರಲಿಲ್ಲ” ಎಂದು ಹರಿಹಾಯ್ದರು. ಹಾಗೆಯೇ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ರಾಜ್ಯ, ದೇಶದ ಅಭಿವೃದ್ಧಿಗೆ ಕಾರಣರಾಗಬೇಕು ಎಂದರು. ಭಾಷಣದ ವೇಳೆ ಮೋದಿ ಅವರು ವಿಶ್ವಕರ್ಮ ಯೋಜನೆ, ಮುದ್ರಾ ಯೋಜನೆ, ಸನಾತನ ಧರ್ಮ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.

Exit mobile version