ನವದೆಹಲಿ: ಸಂಸತ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆಯು ಕಾವೇರುತ್ತಿದೆ. ಬುಧವಾರ (ಆಗಸ್ಟ್ 9) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿದ ಆರೋಪಗಳಿಗೆ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅಮಿತ್ ಶಾ ತಿರುಗೇಟು ನೀಡಿದ್ದಾರೆ. ಇನ್ನು ಗುರುವಾರ ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಸಂಸತ್‌ನಲ್ಲಿ ಅವಿಶ್ವಾಸ ಗೊತ್ತುವಳಿ (No Confidence Motion) ಕುರಿತು ಮಾತನಾಡಲಿದ್ದಾರೆ. ಇದರ ಬೆನ್ನಲ್ಲೇ, “ನರೇಂದ್ರ ಮೋದಿ ಅವರು ಸರಿ ಇಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ಬಾಣ ಬಿಟ್ಟಿದ್ದಾರೆ.
ಗುರುವಾರ ಸಂಸತ್ ಕಲಾಪ ಆರಂಭವಾಗುವುದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೆ ಹಿಂಸಾಪೀಡಿತ ಮಣಿಪುರಕ್ಕೆ ತೆರಳಿಲ್ಲ. ಅವರು ಹಿಂಸಾಚಾರ ನಿಯಂತ್ರಿಸುವುದು ಬಿಡಿ, ಹಿಂಸಾಚಾರದ ಕುರಿತು ಸಮರ್ಪಕವಾಗಿ ಚರ್ಚೆಗೆ ಬಂದಿಲ್ಲ. ಹಾಗಾಗಿ, ನರೇಂದ್ರ ಮೋದಿ ಅವರು ಸರಿಯಿಲ್ಲ” ಎಂದು ಟೀಕಿಸಿದರು. ಇನ್ನು ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ನರೇಂದ್ರ ಮೋದಿ ಅವರು ಸಂಸತ್ತಿಗೆ ಬರಲಿ. ಅವರೇನೂ ದೇವರಲ್ಲ” ಎಂದು ಕೂಡ ಚಾಟಿ ಬೀಸಿದ್ದಾರೆ.
ಸಂಜೆ 4ಕ್ಕೆ ಮೋದಿ ಮಾತು
ಸಂಸತ್ತಿನಲ್ಲಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ 4 ಗಂಟೆಗೆ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. “ಮೋದಿ ಅವರು ಅವಿಶ್ವಾಸ ಗೊತ್ತುವಳಿ ಕುರಿತು ಮಾತನಾಡಲಿದ್ದಾರೆ” ಎಂದು ಪ್ರಧಾನಮಂತ್ರಿ ಕಚೇರಿ (PMO) ಮಾಹಿತಿ ನೀಡಿದೆ. ನರೇಂದ್ರ ಮೋದಿ ಅವರು ಮಣಿಪುರ ಹಿಂಸಾಚಾರ, ಶಾಂತಿಸ್ಥಾಪನೆಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಅವರು ಪ್ರತಿಪಕ್ಷಗಳಿಗೆ ಟಾಂಗ್ ನೀಡಲಿದ್ದಾರೆ ಹಾಗೂ ಪ್ರತಿಪಕ್ಷಗಳು ಕೂಡ ಮೋದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಿಎಂಒ ಟ್ವೀಟ್
ಇದನ್ನೂ ಓದಿ: Amit Shah: ಬೆಳಗ್ಗೆ 4ಕ್ಕೇ ಮೋದಿಯಿಂದ ಕರೆ; ಭಾರತ ಮಾತೆಯ ಹತ್ಯೆ ಎಂದ ರಾಹುಲ್ ಗಾಂಧಿಗೆ ಅಮಿತ್ ಶಾ ತಪರಾಕಿ
“ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೆ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಅವರು ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಶಾಂತಿ ಸ್ಥಾಪನೆ ಮಾಡಬಹುದಿತ್ತು. ಆದರೆ, ಮೋದಿ ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಮಣಿಪುರದಲ್ಲಿ ಭಾರತ ಮಾತೆಯನ್ನು ಹತ್ಯೆಗೈಯಲಾಗಿದೆ” ಎಂದು ಈಗಾಗಲೇ ರಾಹುಲ್ ಗಾಂಧಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಮಣಿಪುರ ವಿಚಾರದಲ್ಲಿ ಕೇಂದ್ರ ಸರ್ಕಾರ ಎಂದಿಗೂ ನಿರ್ಲಕ್ಷ್ಯ ವಹಿಸಿಲ್ಲ. ಇದು ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷಗಳ ಡ್ರಾಮಾ” ಎಂದು ಕುಟುಕಿದ್ದರು.