ಜಮ್ಮು: ಜಮ್ಮು ಕಾಶ್ಮೀರದಲ್ಲಿ ಅನ್ವಯವಾಗಿದ್ದ ಸಂವಿಧಾನದ 370ನೇ ವಿಧಿಯನ್ನು ತೆರವುಗೊಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ಭೇಟಿಯಲ್ಲಿ ರಾಜ್ಯಕ್ಕೆ ಸುಮಾರು ₹20,000 ಕೋಟಿ ಯೋಜನೆಗಳಿಗೆ ಭಾನುವಾರ ಚಾಲನೆ ನೀಡಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಅನ್ವಯಿಸಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ತೆರವುಗೊಳಿಸಲು ವಿರುದ್ಧ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ದೇಶದ ಇತರೆ ಭಾಗಗಳಿಂದ ಈ ರಾಜ್ಯವನ್ನು ಪ್ರತ್ಯೇಕಿಸುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಪ್ರಾರಂಭದಿಂದಲೂ ಇದನ್ನು ತೆರವುಗೊಳಿಸಲು ಹೋರಾಟ ಮಾಡುತ್ತಿತ್ತು. 2019ರಲ್ಲಿ 370ನೇ ವಿಧಿಯನ್ನು ತೆರವುಗೊಳಿಸಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲಾಯಿತು. ಜಮ್ಮು ಕಾಶ್ಮೀರದಿಂದ ಪ್ರತ್ಯೇಕಿಸಲಾದ ಲಡಾಖ್ ಅನ್ನೂ ಕೇಂದ್ರಾಡಳಿತ ಪ್ರದೇಶವಾಗಿಸಲಾಯಿತು.
ಈ ನಿರ್ಧಾರದ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ಜಮ್ಮು ಕಾಶ್ಮೀರಕ್ಕೆ ಭಾನುವಾರ ಭೇಟಿ ನೀಡಿದರು. ಮೋದಿ ಭೇಟಿಗೂ ಮುನ್ನ ಭಯೋತ್ಪಾದಕ ಚಟುವಟಿಕೆಗಳನ್ನು ಕಂಡಿದ್ದರೂ ಭದ್ರತಾ ಪಡೆಗಳು ಹಾಗೂ ಪೊಲೀಸರು ಭಾರೀ ಬಿಗಿ ಭದ್ರತೆ ಒದಗಿಸಿದ್ದರು.
ಇದನ್ನೂ ಓದಿ: ʼಪರಾಕ್ರಮಿʼ ಮನೋಜ್ ಪಾಂಡೆ ನೂತನ ಸೇನಾ ಮುಖ್ಯಸ್ಥ
ರಾಷ್ಟ್ರೀಯ ಪಂಚಾಯತಿ ದಿನದ ಅಂಗವಾಗಿ ಜಮ್ಮುವಿನ ಬಳಿಯ ಪಲ್ಲಿ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮೋದಿ ಭಾಷಣ ಮಾಡಿದರು. ಕಾರ್ಯಕ್ರಮದ ಸ್ಥಳಕ್ಕೆ ಕೂಗಳತೆಯ ದೂರದಲ್ಲೆ ಜಮೀನಿನಲ್ಲಿ ಸ್ಪೋಟವಾಗಿತ್ತು. ಇದೆಲ್ಲದರ ನಡುವೆ ಮೋದಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಸರ್ಕಾರಿ ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುವ ಮೂಲಕ ಜನಜೀವನವನ್ನು ಸರಳವಾಗಿಸಲು ನಮ್ಮ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಲ್ಲಿ ಸಾಂವಿಧಾನಿಕ ಸುಧಾರಣೆಗಳೂ ಸೇರಿವೆ” ಎಂದು 370ನೇ ಪರಿಚ್ಛೇದದ ಕುರಿತು ಪರೋಕ್ಷವಾಗಿ ಉಲ್ಲೇಖಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲೂ 75 ಕೆರೆಗಳನ್ನು ಅಭಿವೃದ್ಧಿಪಡಿಸುವ ಅಮೃತ ಸರೋವರ ಯೋಜನೆಯೂ ಮೋದಿ ಅವರು ಘೋಷಿಸಿದ ಯೋಜನೆಗಳಲ್ಲಿತ್ತು. ಅದರ ಜತೆಗೆ ಸುಮಾರು ₹3,100 ಕೋಟಿ ಮೊತ್ತದಲ್ಲಿ ನಿರ್ಮಾಣವಾಗಲಿರುವ ಬನಿಹಾಲ್-ಕ್ವಾಜಿಗುಂಡ್ ಸುರಂಗ ರಸ್ತೆ ಯೋಜನೆಯು ಈ ಎರಡು ಪ್ರದೇಶಗಳ ನಡುವಿನ ಪ್ರಯಾಣ ಸಮಯವನ್ನು ಸುಮಾರು ಒಂದೂವರೆ ಗಂಟೆ ತಗ್ಗಿಸುತ್ತದೆ. ದೆಹಲಿ-ಅಮೃತಸರ-ಕಟ್ರಾ ನಡುವಿನ ಮೂರು ರಸ್ತೆ ಪ್ಯಾಕೇಜ್ ಯೋಜನೆಗಳಿಗೆ ಸುಮಾರು ₹7,500 ಕೋಟಿ ವೆಚ್ಚವಾಗಲಿದ್ದು, ಪ್ರಯಾಣ ವ್ಯವಸ್ಥೆಯನ್ನು ಸುಧಾರಿಸಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿಯವರು ಹೊಸ ಕೈಗಾರಿಕಾ ಯೋಜನೆ ನೀಡಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಇಲ್ಲಿವರೆಗೆ ಕೇವಲ ₹15,000 ಕೋಟಿ ಹೂಡಿಕೆ ಆಗಿದೆ. ಈಗ ನಾವು ಇದನ್ನು ₹52,000 ಕೋಟಿಗೆ ಹೆಚ್ಚಿಸುವ ಪ್ರಸ್ಥಾವನೆ ಹೊಂದಿದ್ದೇವೆ. ಹೂಡಿಕೆ ಮೊತ್ತವು ₹70,000 ಕೋಟಿಯನ್ನೂ ಮೀರುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆʼ ಎಂದು ತಿಳಿಸಿದ್ದಾರೆ.