Site icon Vistara News

New Parliament Building: ಸಂಸತ್‌ ಭವನ ಉದ್ಘಾಟನೆ ಯಾರಿಂದ? ರಾಷ್ಟ್ರಪತಿಯೋ? ಪ್ರಧಾನಿಯೋ? ಇಲ್ಲಿದೆ ಮಾಹಿತಿ

Narendra Modi

Narendra Modi

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಲಾಗಿರುವ ನೂತನ ಸಂಸತ್‌ ಭವನವನ್ನು (New Parliament Building) ಯಾರು ಉದ್ಘಾಟಿಸಲಿದ್ದಾರೆ ಎಂಬ ಪ್ರಶ್ನೆಗೆ ಕೊನೆಗೂ ತೆರೆ ಬಿದ್ದಿದೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರ ಜಯಂತಿಯ ದಿನ ಅಂದರೆ, ಮೇ 28ರಂದು ನೂತನ ಸಂಸತ್‌ ಭವನದ ಉದ್ಘಾಟನೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಉಪಸ್ಥಿತಿಯಲ್ಲಿ ಸಂಸತ್‌ ಭವನವನ್ನು ಉದ್ಘಾಟಿಸಲಿದ್ದಾರೆ.

ಸಂಸತ್‌ ಭವನದ ಉದ್ಘಾಟನೆಗೆ ದಿನಾಂಕ ನಿಗದಿಯಾದಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಇದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. “ಸಾಂವಿಧಾನಿಕ ಶ್ರೇಷ್ಠ ಹುದ್ದೆಯಲ್ಲಿರುವ ರಾಷ್ಟ್ರಪತಿ ಅಥವಾ ಉಪ ರಾಷ್ಟ್ರಪತಿ ಅವರೇ ನೂತನ ಸಂಸತ್‌ ಭವನವನ್ನು ಉದ್ಘಾಟಿಸಬೇಕು” ಎಂದು ಆಗ್ರಹಿಸಿದ್ದವು. ಆದರೆ, ಈಗ ಸಂಸತ್‌ ಭವನದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಸಿದ್ಧವಾಗಿದ್ದು, ಮೋದಿ ಹಾಗೂ ಸ್ಪೀಕರ್‌ ಉದ್ಘಾಟಿಸಲಿದ್ದಾರೆ.

ಹೇಗಿದೆ ನೂತನ ಸಂಸತ್‌ ಭವನ?

ಸೆಂಟ್ರಲ್​ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ನೂತನ ಸಂಸತ್​ ಕಟ್ಟಡ ನಿರ್ಮಿಸಲಾಗಿದೆ. ಈ ನೂತನ ಕಟ್ಟಡ 65 ಸಾವಿರ ಚದರ ಮೀಟರ್ ಪ್ರದೇಶಕ್ಕೆ ವ್ಯಾಪಿಸಿದೆ. ಲೋಕಸಭೆ ಮತ್ತು ರಾಜ್ಯ ಸಭೆ ಕಾರ್ಯ-ಕಲಾಪಗಳಿಗಾಗಿ ಎರಡು ದೊಡ್ಡ-ವಿಶಾಲವಾದ ಸಭಾಂಗಣಗಳನ್ನು ಹೊಂದಿದೆ. ಒಂದು ಗ್ರಂಥಾಲಯ, ಸಂಸದರ ಕಚೇರಿಗಳು, ಸಭೆಗಳಿಗಾಗಿ ಸಮಿತಿ ರೂಮ್​​ಗಳು ಮತ್ತಿತರ ಸೌಕರ್ಯಗಳನ್ನು ಹೊಂದಿರಲಿದೆ. ಲೋಕಸಭೆ ಕಲಾಪ ನಡೆಯುವ ಹಾಲ್​ಗಳಲ್ಲಿ 888 ಸಂಸದರು ಮತ್ತು ರಾಜ್ಯ ಸಭೆ ಕಲಾಪ ನಡೆಯುವಲ್ಲಿ 384 ಸಂಸದರು ಕುಳಿತುಕೊಳ್ಳಬಹುದಾಗಿದೆ. ಅಂದಹಾಗೆ, ಲೋಕಸಭೆ ಹಾಲ್​​ಅನ್ನು ರಾಷ್ಟ್ರಪಕ್ಷಿ ನವಿಲು ಮತ್ತು ರಾಜ್ಯಸಭೆಯನ್ನು ಕಮಲದ ಹೂವಿನ ಥೀಮ್​​ನಲ್ಲಿ ನಿರ್ಮಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ 9ವರ್ಷ; ನೂತನ ಸಂಸತ್​ ಭವನ ಉದ್ಘಾಟನೆಗೆ ದಿನಾಂಕ ಫಿಕ್ಸ್​?

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನಕ್ಕೆ ದಿಢೀರ್‌ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದ್ದರು. ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ ಸಂಸತ್‌ ಭವನಕ್ಕೆ ಭೇಟಿ ನೀಡಿದ ಅವರು, ಒಂದು ಗಂಟೆಗೂ ಹೆಚ್ಚು ಸಮಯವನ್ನು ಅಲ್ಲಿಯೇ ಕಳೆದಿದ್ದರು. ಕಾಮಗಾರಿ ಪರಿಶೀಲನೆ ಜತೆಗೆ ನಿರ್ಮಾಣ ಕಾರ್ಮಿಕರ ಜತೆ ಮಾತುಕತೆಯನ್ನೂ ನಡೆಸಿದ್ದರು. ಸಂಸತ್ತಿನ ಉಭಯ ಸದನಗಳಿಗೆ ತೆರಳಿ ಕಾಮಗಾರಿ ಪರಿಶೀಲನೆ, ಅತ್ಯಾಧುನಿಕ ಸೌಕರ್ಯಗಳ ಕುರಿತು ಮಾಹಿತಿ ಪಡೆದಿದ್ದರು.

Exit mobile version