Site icon Vistara News

Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

Modi Meditation

Narendra Modi Meditation In Kanyakumari violates poll code: Congress moves EC against PM

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪಾಕಿಸ್ತಾನ, ಜಮ್ಮು-ಕಾಶ್ಮೀರ, ಮೀಸಲಾತಿ, ರಾಮಮಂದಿರ, ಜಾತಿ, ಧರ್ಮ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಇದುವರೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ವಿಷಯಗಳ ಕುರಿತು ಟೀಕೆ, ವಾದ, ವಾಗ್ವಾದಗಳು ನಡೆದಿವೆ. ಈಗ ಚುನಾವಣೆ ಅಂತಿಮ ಹಂತ ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಧ್ಯಾನ (Modi Meditation) ಮಾಡಲು ತೀರ್ಮಾನಿಸಿದ್ದಾರೆ. ಆದರೆ, ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ.

ನರೇಂದ್ರ ಮೋದಿ ಅವರು ಗುರುವಾರ (ಮೇ 30) ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ. ಕನ್ಯಾಕುಮಾರಿಯಲ್ಲಿರುವ ರಾಕ್‌ ಮೆಮೋರಿಯಲ್‌ಗೆ ಭೇಟಿ ನೀಡಲಿದ್ದಾರೆ. ಮೇ 30 ಸಂಜೆಯಿಂದ ಜೂನ್‌ 1ರವರೆಗೆ ಧ್ಯಾನ ಮಂಟಪದಲ್ಲಿ ಮೋದಿ ಅವರು ಧ್ಯಾನ ಮಾಡಲು ತೀರ್ಮಾನಿಸಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಮೋದಿ ಕೂಡ ಧ್ಯಾನ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಇದು ಈಗ ದೇಶದ ಗಮನ ಸೆಳೆದಿದ್ದು, ಕಾಂಗ್ರೆಸ್‌ ದೂರು ನೀಡಿದೆ.

“ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದೆ. ಮಾದರಿ ನೀತಿ ಸಂಹಿತೆ ಪ್ರಕಾರ, ಮತದಾನಕ್ಕೂ 48 ಗಂಟೆ ಮೊದಲು ಯಾರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಚಾರ ಕೈಗೊಳ್ಳಬಾರದು. ನರೇಂದ್ರ ಮೋದಿ ಅವರು ಧ್ಯಾನ ಸೇರಿ ಏನು ಬೇಕಾದರೂ ಮಾಡಬಹುದು. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅವರು ಮಾದರಿ ನೀತಿ ಸಂಹಿತೆಯನ್ನು ಮೀರಿ ಧ್ಯಾನ ಮಾಡಲು ತೀರ್ಮಾನಿಸಿದ್ದಾರೆ. ಇದು ಮತದಾನದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ನರೇಂದ್ರ ಮೋದಿ ವಿರುದ್ಧ ನಾವು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ” ಎಂದು ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ದೆಹಲಿಯಲ್ಲಿ ಮಾಹಿತಿ ನೀಡಿದ್ದಾರೆ.

“ಮೇ 30ರ ಸಂಜೆ 7 ಗಂಟೆಯಿಂದ ಜೂನ್‌ 1ರವರೆಗೆ ರಾಜಕೀಯ ನಾಯಕರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಚಾರ ಮಾಡಬಾರದು ಎಂಬ ನಿಯಮವಿದೆ. ಆದರೆ, ನರೇಂದ್ರ ಮೋದಿ ಅವರು ಮೇ 30ರಿಂದ ಜೂನ್‌ 1ರವರೆಗೆ ಧ್ಯಾನ ಮಾಡಲಿದ್ದಾರೆ. ಇದರ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತದೆ. ಪತ್ರಿಕೆಗಳಲ್ಲೂ ವರದಿಗಳು ಪ್ರಕಟವಾಗುತ್ತವೆ. ಇದರಿಂದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ನರೇಂದ್ರ ಮೋದಿ ಅವರು ಜೂನ್‌ 1ರ ಸಂಜೆಯಿಂದ ಧ್ಯಾನ ಆರಂಭಿಸಬೇಕು ಎಂಬುದಾಗಿ ಚುನಾವಣೆ ಆಯೋಗವು ಸೂಚಿಸಬೇಕು. ಜೂನ್‌ 30ರಂದೇ ಧ್ಯಾನ ಆರಂಭಿಸುವುದಾದರೆ, ಮಾಧ್ಯಮಗಳಲ್ಲಿ ವರದಿ ಪ್ರಕಟಿಸುವುದನ್ನು ತಡೆಯಬೇಕು ಎಂಬುದಾಗಿ ಮನವಿ ಮಾಡಿದ್ದೇವೆ” ಎಂದು ಸಿಂಘ್ವಿ ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election : ಕನ್ಯಾಕುಮಾರಿಯಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ ಮೋದಿ

Exit mobile version