Site icon Vistara News

Narendra Modi: ರಾಷ್ಟ್ರಪತಿಯನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮೋದಿ; ಈಗ ಹಂಗಾಮಿ ಪ್ರಧಾನಿ!

Narendra Modi

Narendra Modi meets President Droupadi Murmu, stakes claim to form govt

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಎನ್‌ಡಿಎ ಮೈತ್ರಿಕೂಟವು 292 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಎನ್‌ಡಿಎ ಸಭೆಯಲ್ಲಿ (NDA Meeting) ನರೇಂದ್ರ ಮೋದಿ (Narendra Modi) ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜೂನ್‌ 9ರಂದು ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗಾಗಿ, ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಯಾದ ನರೇಂದ್ರ ಮೋದಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇದೇ ವೇಳೆ, ನರೇಂದ್ರ ಮೋದಿ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ದ್ರೌಪದಿ ಮುರ್ಮು (Droupadi Murmu) ಅವರು ನೇಂಮಿಸಿದ್ದಾರೆ.

ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಬಳಿಕ ಮೋದಿ ಮಾತನಾಡಿದರು. “ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ಜೂನ್‌ 9ರಂದು ಪ್ರಮಾಣವಚನ ಸ್ವೀಕರಿಸಲು ಮನವಿ ಮಾಡಲಾಗಿದೆ. ಇನ್ನುಳಿದ ಮಾಹಿತಿಯನ್ನು ರಾಷ್ಟ್ರಪತಿ ಭವನ ನೀಡಲಿದೆ. ಸಾಮಾನ್ಯ ಜನರ ಕನಸು ಪೂರ್ತಿಗೊಳಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ. ಇನ್ನಷ್ಟು ವೇಗದೊಂದಿಗೆ ಕೆಲಸ ಮುಂದುವರಿಸೋಣ. 2014 ರಲ್ಲಿ ನಾನು ಹೊಸಬನಾಗಿದ್ದೆ. ಈಗ ನನಗೆ ಅನುಭವ ಸಿಕ್ಕಿದೆ, ಹೀಗಾಗಿ ಕೂಡಲೇ ಆರಂಭಿಸಲಿದ್ದೇವೆ. ಈ ಅನುಭವ ದೇಶದ ಸೇವೆಗೆ ಸಿಗಲಿದೆ” ಎಂದು ತಿಳಿಸಿದರು.

ಸಂಸದೀಯ ಪಕ್ಷದ ಸಭೆಯಲ್ಲಿ ರಾಜನಾಥ್‌ ಸಿಂಗ್‌ ಅವರು ನರೇಂದ್ರ ಮೋದಿ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕ ಎಂಬುದಾಗಿ ಪ್ರಸ್ತಾಪಿಸಿದರು. ಇದಕ್ಕೆ, ಎನ್‌ಡಿಎ ಮೈತ್ರಿಕೂಟದ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಇದಾದ ಬಳಿಕ ನಿತೀಶ್‌ ಕುಮಾರ್‌ ಅವರು ನರೇಂದ್ರ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾದರು. ಆಗ ಮೋದಿ ಅವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ನರೇಂದ್ರ ಮೋದಿ ಅವರಿಗೆ 73 ವರ್ಷ ವಯಸ್ಸಾಗಿದ್ದರೆ, ನಿತೀಶ್‌ ಕುಮಾರ್‌ ಅವರು ವಯಸ್ಸು ಕೂಡ 73 ವರ್ಷವಾಗಿದೆ. ಇಬ್ಬರೂ ಸಮಕಾಲೀನ ನಾಯಕರಾಗಿದ್ದಾರೆ.

ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು ನಿತೀಶ್‌ ಕುಮಾರ್‌, ಪವನ್‌ ಕಲ್ಯಾಣ್‌ ಸೇರಿ ಹಲವರನ್ನು ಹೊಗಳಿದರು. ಯೋಗಿ ಆದಿತ್ಯನಾಥ್‌ ಅವರ ಬೆನ್ನನ್ನೂ ತಟ್ಟಿದರು. ಇದೇ ವೇಳೆ, ದಕ್ಷಿಣ ಭಾರತದ ಫಲಿತಾಂಶದ ಕುರಿತು ಕೂಡ ಮೋದಿ ಪ್ರಸ್ತಾಪಿಸಿದರು.

“ದಕ್ಷಿಣ ಭಾರತದಲ್ಲಿ ಎನ್‌ಡಿಎ ಬುನಾದಿ ಭದ್ರವಾಗಿದ್ದು, ಹೊಸ ರಾಜಕೀಯಕ್ಕೆ ಇದು ನಾಂದಿಯಾಗಿದೆ. ಕರ್ನಾಟಕ ಹಾಗೂ ತೆಲಂಗಾಣವನ್ನೇ ತೆಗೆದುಕೊಳ್ಳಿ, ಇತ್ತೀಚೆಗೆ ಬೇರೆ ಪಕ್ಷಗಳ ಸರ್ಕಾರಗಳು ಅಲ್ಲಿ ಆಡಳಿತಕ್ಕೆ ಬಂದಿವೆ. ಆದರೆ, ಜನರು ಭ್ರಮೆಯಿಂದ ಹೊರಬಂದು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಜನ ಎನ್‌ಡಿಎ ಮೈತ್ರಿಕೂಟವನ್ನು ಸ್ವೀಕರಿಸಿದ್ದಾರೆ. ಇದು ಎನ್‌ಡಿಎ ಮೇಲೆ ಜನ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: NDA Meeting: ಎನ್‌ಡಿಎ ಸಭೆಯಲ್ಲಿ ಮೋದಿಯ ಪಾದ ಮುಟ್ಟಿ ನಮಸ್ಕರಿಸಲು ಹೋದ ನಿತೀಶ್ ಕುಮಾರ್! ವಿಡಿಯೊ ನೋಡಿ

Exit mobile version