Site icon Vistara News

ಅಯೋಧ್ಯೆಯಲ್ಲಿ ಮಹಿಳೆಯೊಬ್ಬರ ಮನೆಗೆ ತೆರಳಿ ಟೀ ಕುಡಿದ ಮೋದಿ; ಯಾರಿವರು ಮೀರಾ ಮಾಂಝಿ?

Narendra Modi Visits Meera Manjhi House

Narendra Modi paid surprise visit to Meera Manjhi's residence in Ayodhya; Who is she?

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಡಿಸೆಂಬರ್‌ 30) ಅಯೋಧ್ಯೆಗೆ ಭೇಟಿ ನೀಡುವ ಮೂಲಕ ರಾಮಮಂದಿರ (Ram Mandir) ಉದ್ಘಾಟನೆಗೆ ಮೊದಲೇ ನಗರದಲ್ಲಿ ರಾಮಜಪ ಜೋರಾಗುವಂತೆ ಮಾಡಿದ್ದಾರೆ. ಅಯೋಧ್ಯೆ ವಿಮಾನ ನಿಲ್ದಾಣ (Ayodhya Airport) ಉದ್ಘಾಟನೆ, ಅಮೃತ ಭಾರತ ರೈಲುಗಳಿಗೆ ಚಾಲನೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ಅಯೋಧ್ಯೆ ಭೇಟಿ ವೇಳೆ ನರೇಂದ್ರ ಮೋದಿ ಅವರು ಮೀರಾ ಮಾಂಝಿ (Meera Manjhi) ಎಂಬ ಮಹಿಳೆಯೊಬ್ಬರ ಮನೆಗೆ ದಿಢೀರ್‌ ಭೇಟಿ ನೀಡಿದ್ದು, ಅವರ ಮನೆಯಲ್ಲಿ ಚಹಾ ಕೂಡ ಸವಿದರು.

ಯಾರಿವರು ಮೀರಾ ಮಾಂಝಿ?

ಮೀರಾ ಮಾಂಝಿ ಅವರು ಗೃಹಿಣಿಯಾಗಿದ್ದು, ಅಯೋಧ್ಯೆಯಲ್ಲಿ ಪತಿ, ಅತ್ತೆ-ಮಾವ ಹಾಗೂ ಮಕ್ಕಳ ಜತೆ ವಾಸಿಸುತ್ತಿದ್ದಾರೆ. ಇವರು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆದ 10 ಕೋಟಿ (10 Croreth) ಮಹಿಳೆ ಎನಿಸಿದ್ದಾರೆ. ಹಾಗಾಗಿ, ನರೇಂದ್ರ ಮೋದಿ ಅವರು ಮೀರಾ ಮಾಂಝಿ ಅವರ ಮನೆಗೆ ದಿಢೀರನೆ ಭೇಟಿ ನೀಡಿ, ಅವರ ಕುಟುಂಬಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಹಾಗೆಯೇ, ಅವರ ಮನೆಯಲ್ಲಿ ಚಹಾ ಕೂಡ ಕುಡಿದರು. ಬಡತನ ರೇಖೆಗಿಂತ ಕೆಳಗಿರುವವರಿಗೆ (BPL) ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆಯೇ ಪಿಎಂ ಉಜ್ವಲ ಯೋಜನೆಯಾಗಿದೆ.

ಮೋದಿ ಬರುವುದು ಗೊತ್ತಿರಲಿಲ್ಲ

ನರೇಂದ್ರ ಮೋದಿ ಅವರು ಭೇಟಿ ನೀಡುವ ವಿಷಯವು ಮೀರಾ ಮಾಂಝಿ ಅವರಿಗೆ ಗೊತ್ತೇ ಇರಲಿಲ್ಲ. ಅವರಿಗೆ ತಿಳಿಸಿದೆಯೇ ಮೋದಿ ಸರ್‌ಪ್ರೈಸ್‌ ವಿಸಿಟ್‌ ಮಾಡಿದ್ದಾರೆ. “ನರೇಂದ್ರ ಮೋದಿ ಅವರು ನಮ್ಮ ಮನೆಗೆ ಬರುತ್ತಾರೆ ಎಂಬ ವಿಷಯವೇ ಗೊತ್ತಿರಲಿಲ್ಲ. ನನ್ನ ಪಾಡಿಗೆ ನಾನು ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ಇನ್ನೇನು ಅಡುಗೆ ಮುಗಿಯಬೇಕು ಎನ್ನುವಷ್ಟರಲ್ಲಿ ನರೇಂದ್ರ ಮೋದಿ ಅವರು ನಮ್ಮ ಮನೆಯತ್ತ ಬರುವುದನ್ನು ನೋಡಿದೆ. ಇದು ಕನಸೋ ಏನೋ ಎನ್ನುವಷ್ಟರಲ್ಲಿ ಅವರ ನಮ್ಮ ಮನೆಗೆ ಬಂದರು. ನಾನೇ ಅವರನ್ನು ಸ್ವಾಗತಿಸಿದೆ” ಎಂದು ಮೋದಿ ಭೇಟಿ ಬಳಿಕ ಮೀರಾ ಮಾಂಝಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನ; ಜೈ ಶ್ರೀರಾಮ್‌ ಎಂದ ಪ್ರಯಾಣಿಕರು! ವಿಡಿಯೊ ಇದೆ

ಚಹಾ ಚೆನ್ನಾಗಿದೆ ಎಂದು ಹೊಗಳಿದರು

“ನರೇಂದ್ರ ಮೋದಿ ಅವರು ನಮ್ಮ ಮನೆಗೆ ಆಗಮಿಸಿ ಅರ್ಧ ಗಂಟೆ ಕಳೆದರು. ಅವರು ನನ್ನ ಕುಟುಂಬಸ್ಥರೊಂದಿಗೆ ಮಾತನಾಡಿದರು. ಉಜ್ವಲ ಯೋಜನೆಯ ಲಾಭದ ಬಗ್ಗೆ ಕೇಳಿದರು. ಹಾಗೆಯೇ ಅಡುಗೆ ಏನು ಮಾಡಿದ್ದೀರಿ ಎಂದರು. ಅನ್ನ, ದಾಲ್‌ ಮಾಡಿದ್ದೇನೆ ಎಂಬುದಾಗಿ ಉತ್ತರಿಸಿದೆ. ನನಗೊಂದು ಕಪ್‌ ಟೀ ಕೊಡಿ ಎಂದು ಕೇಳಿದರು. ಚಳಿಗಾಲದಲ್ಲಿ ಟೀ ಕುಡಿಯುವುದೇ ಪರಮಾನಂದ ಎಂದರು. ಚಹಾ ಹೇಗಿದೆ ಎಂದು ನಾನು ಕೇಳಿದ್ದಕ್ಕೆ, ಚಹಾ ಚೆನ್ನಾಗಿದೆ. ಆದರೆ, ಸಕ್ಕರೆ ಸ್ವಲ್ಪ ಜಾಸ್ತಿಯಾಗಿದೆ ಎಂಬುದಾಗಿ ತಿಳಿಸಿದರು” ಎಂದು ಮೀರಾ ಮಾಂಝಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version