Site icon Vistara News

Narendra Modi: ಕೇರಳದ ಪ್ರಮುಖ ಪಾದ್ರಿಗಳ ಭೇಟಿ ಮಾಡಿದ ಪ್ರಧಾನಿ ಮೋದಿ, ಕ್ರೈಸ್ತ ಸಮುದಾಯದತ್ತ ಪಕ್ಷದ ಗಮನ

modi

ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕೇರಳದ ವಿವಿಧ ಚರ್ಚ್‌ಗಳ ಪ್ರಮುಖ ಪಾದ್ರಿಗಳನ್ನು ಭೇಟಿ ಮಾಡಿದರು. 2024ರ ಲೋಕಸಭೆ ಚುನಾವಣೆಗೆ ಮುನ್ನ ಇಲ್ಲಿನ ಪ್ರಭಾವಿ ಅಲ್ಪಸಂಖ್ಯಾತ ಸಮುದಾಯವನ್ನು ಮುಟ್ಟಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳಿಗೆ ಉತ್ತೇಜನವಾಗಿ ಈ ಕಾರ್ಯಕ್ರಮ ನಡೆದಿದೆ ಎಂದು ನಂಬಲಾಗಿದೆ.

ಎರಡು ದಿನಗಳ ಭೇಟಿಗಾಗಿ ಮೋದಿಯವರು ಕೇರಳಕ್ಕೆ ಆಗಮಿಸಿದ್ದಾರೆ. ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಕಾರ್ಡಿನಲ್ ಜಾರ್ಜ್ ಅಲೆಂಚೇರಿ, ಸೈರೋ-ಮಲಂಕಾರ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಕಾರ್ಡಿನಲ್ ಬಸೆಲಿಯೋಸ್ ಕ್ಲೀಮಿಸ್, ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ಮುಖ್ಯಸ್ಥ ಬಸೆಲಿಯೋಸ್ ಮಾರ್ಥೋಮಾ ಮ್ಯಾಥ್ಯೂಸ್, ಜಾಕೋಬೈಟ್ ಚರ್ಚ್‌ನ ಮೆಟ್ರೋಪಾಲಿಟನ್ ಟ್ರಸ್ಟಿ ಜೋಸೆಫ್ ಮೋರ್ ಗ್ರೆಗೋರಿಯೊಸ್ ಸೇರಿದಂತೆ ಎಂಟು ಪ್ರಮುಖ ಚರ್ಚ್ ಪಾದ್ರಿಗಳನ್ನು ಮೋದಿ ಭೇಟಿಯಾದರು.

ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್‌ನ ಹಿರಿಯ ಪಾದ್ರಿ ಆರ್ಚ್‌ಬಿಷಪ್ ಜೋಸೆಫ್ ಕಾಳತಿಪರಂಬಿಲ್, ಕ್ನಾನಾಯ ಚರ್ಚ್‌ನ ಆರ್ಚ್‌ಬಿಷಪ್ ಮ್ಯಾಥ್ಯೂ ಮೂಲಕ್ಕಾಟ್, ಕ್ನಾನಾಯಾ ಜಾಕೋಬೈಟ್ ಆರ್ಚ್‌ಡಯಾಸಿಸ್‌ನ ಆರ್ಚ್‌ಬಿಷಪ್ ಕುರಿಯಾಕೋಸ್ ಮಾರ್ ಸೆವೆರಿಯೋಸ್ ಮತ್ತು ಚಾಲ್ಡಿಯನ್ ಸಿರಿಯನ್ ಚರ್ಚ್‌ನ ಮೆಟ್ರೋಪಾಲಿಟನ್ ಮಾರ್ ಆವ್ಗಿನ್ ಕುರಿಯಾಕೋಸ್ ಅವರನ್ನೂ ಪ್ರಧಾನಿ ಭೇಟಿ ಮಾಡಿದರು.

ಕೊಚ್ಚಿಯ ಸೇಕ್ರೆಡ್ ಹಾರ್ಟ್ಸ್ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ರೋಡ್ ಶೋ ಮತ್ತು ʼಯುವಂ 2023ʼ ಯುವ ಸಮಾವೇಶದಲ್ಲಿ ಪ್ರಧಾನಿ ಭಾಗವಹಿಸಿದ ನಂತರ ಬಿಜೆಪಿಯ ಪ್ರಚಾರ ಅಭಿಯಾನ ʼಸ್ನೇಹ ಯಾತ್ರೆ’ಯ ಸಭೆ ತಾಜ್ ಮಲಬಾರ್‌ ಹೋಟೆಲ್‌ನಲ್ಲಿ ನಡೆಯಿತು.

ಅಲ್ಪಸಂಖ್ಯಾತರನ್ನು ಹೆಚ್ಚು ಹೆಚ್ಚು ಮುಟ್ಟುವ ಪಕ್ಷದ ಕಾರ್ಯತಂತ್ರದ ಭಾಗವಾಗಿ, ಈಸ್ಟರ್ ಮತ್ತು ಈದ್ ಹಬ್ಬದ ಸಂದರ್ಭಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರ ಮನೆಗಳಿಗೆ ಕೇರಳದ ಬಿಜೆಪಿ ನಾಯಕರು ಭೇಟಿ ನೀಡುತ್ತಿದ್ದಾರೆ. ಕಳೆದ ತಿಂಗಳು ಕ್ರಿಶ್ಚಿಯನ್ ಪ್ರಾಬಲ್ಯದ ನಾಗಾಲ್ಯಾಂಡ್ ಮತ್ತು ಮೇಘಾಲಯ ಸೇರಿದಂತೆ ಮೂರು ಈಶಾನ್ಯ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯಿಂದ ಉತ್ತೇಜಿತರಾಗಿರುವ ಪ್ರಧಾನಿ, ಮುಂಬರುವ ವರ್ಷಗಳಲ್ಲಿ ಕೇರಳದಲ್ಲಿಯೂ ಪಕ್ಷದ ನೇತೃತ್ವದ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಘೋಷಿಸಿದ್ದರು.

“ನಮ್ಮ ಪ್ರತಿಸ್ಪರ್ಧಿಗಳ ಸುಳ್ಳುಗಳು ಕ್ರಮೇಣ ಬಹಿರಂಗಗೊಳ್ಳುತ್ತಿವೆ. ಬಿಜೆಪಿ ವಿಸ್ತರಿಸುತ್ತಿದೆ. ಮೇಘಾಲಯ, ನಾಗಾಲ್ಯಾಂಡ್‌ ಮತ್ತು ಗೋವಾದಲ್ಲಿ ಸಂಭವಿಸಿದಂತೆ, ಮುಂಬರುವ ವರ್ಷಗಳಲ್ಲಿ ಕೇರಳದಲ್ಲಿಯೂ ಬಿಜೆಪಿಯು ಮೈತ್ರಿ ಸರ್ಕಾರ ರಚಿಸುವುದು ಖಚಿತ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: PM Modi in Kerala: ಕೊಚ್ಚಿಯಲ್ಲಿ ಮೋದಿ ರೋಡ್ ಶೋ, ಯುವಮ್‌ನಲ್ಲಿ ಪಾಲ್ಗೊಂಡು ಪ್ರಧಾನಿ ಹೇಳಿದ್ದೇನು?

Exit mobile version