ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಇಂದು (ಜೂನ್ 20) ಆರಂಭವಾಗಲಿದೆ. ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸಿದ ಬಳಿಕ ಅವರ ಮೊದಲ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಇದಾಗಿದ್ದು, ರಾಜ್ಯಾದ್ಯಂತ ವ್ಯಾಪಕ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ನಾಳೆ (ಜೂನ್ 21) ಶ್ರೀನಗರದಲ್ಲಿ ಆಯೋಜಿಸಿರುವ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ (World Yoga Day) ಮೋದಿ ಪಾಲ್ಗೊಳ್ಳಲಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, ಪ್ರಧಾನಿ ಅವರ ಈ ಭೇಟಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಹಲವು ಹಂತಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೂಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಬಹು ಹಂತದ ಭದ್ರತೆಯನ್ನು ಕೈಗೊಳ್ಳಲಾಗಿದೆ. ಭದ್ರತಾ ಪ್ರೋಟೋಕಾಲ್ ಪ್ರಕಾರ ಸುರಕ್ಷತಾ ಕ್ರಮಗಳನ್ನು ಸಜ್ಜುಗೊಳಿಸಲಾಗಿದೆ” ಎಂದು ಕಾಶ್ಮೀರ ವಲಯದ ಐಜಿಪಿ ವಿಧಿ ಕುಮಾರ್ ಬರ್ಡಿ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭದ್ರತಾ ಕ್ರಮದ ಭಾಗವಾಗಿ ಶ್ರೀನಗರದಲ್ಲಿ ಡ್ರೋನ್ ಮತ್ತು ಕ್ವಾಡ್‌ಕಾಪ್ಟರ್ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಪೊಲೀಸರು ಆದೇಶ ಹೊರಡಿಸಿದ್ದಾರೆ. ಡ್ರೋನ್ ನಿಯಮಗಳು 2021ರ ನಿಬಂಧನೆಗಳ ಪ್ರಕಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀನಗರದಲ್ಲಿ ಯೋಗ ದಿನಾಚರಣೆ
ನಾಳೆ ಶ್ರೀನಗರದ ಶೇರ್-ಎ-ಕಾಶ್ಮೀರ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (Sher-e-Kashmir International Conference Centre)ನಲ್ಲಿ 10ನೇ ವಿಶ್ವ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಹಲವರು ಪಾಲ್ಗೊಳ್ಳಲಿದ್ದಾರೆ. 2015ರಿಂದ ಪ್ರಧಾನಿ ಮೋದಿ ಅವರು ದೆಹಲಿಯ ಕಾರ್ತವ್ಯ ಪಥ, ಚಂಡೀಗಢ, ಡೆಹ್ರಾಡೂನ್, ರಾಂಚಿ, ಲಕ್ನೋ ಮತ್ತು ಮೈಸೂರು ಸೇರಿದಂತೆ ವಿವಿಧೆಡೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದಾರೆ. ಕಳೆದ ವರ್ಷ ಮೋದಿ ಅವರ ಮುಂದಾಳತ್ವದಲ್ಲಿ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ನಡೆದಿತ್ತು. ಈ ವರ್ಷ ಶ್ರೀನಗರದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದ್ದು, ಗಮನ ಸೆಳೆಯುವ ನಿರೀಕ್ಷೆಯಿದೆ.
ಶ್ರೀನಗರದ ದಾಲ್ ಸರೋವರದ ತೀರದಲ್ಲಿನ ಶೇರ್-ಐ-ಕಾಶ್ಮೀರ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್‌ನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ 9,000 ಮಂದಿ ಯೋಗ ಪ್ರದರ್ಶನ ನೀಡಲಿದ್ದಾರೆ ಮೂಲಗಳು ತಿಳಿಸಿವೆ. “ಜೂನ್ 21ರಂದು ಶ್ರೀನಗರದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ, ಸುಮಾರು 9,000 ಜನರು ಅವರೊಂದಿಗೆ ಅವರು ಯೋಗ ಪ್ರದರ್ಶನ ನೀಡಲಿದ್ದಾರೆ” ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಎಲ್ಲ 20 ಜಿಲ್ಲೆಗಳನ್ನು ವರ್ಚುವಲ್ ಆಗಿ ಸಂಪರ್ಕಿಸುವ ಯೋಜನೆ ಇದೆ. “ಪ್ರತಿ ಜಿಲ್ಲೆಯಿಂದ 2,000 ಜನರು ಸಂಪರ್ಕ ಸಾಧಿಸಿದರೂ, ಕಾರ್ಯಕ್ರಮದಲ್ಲಿ ಸುಮಾರು 50,000 ಭಾಗವಹಿಸಿದಂತಾಗುತ್ತದೆʼʼ ಎಂದು ಸಿಂಗ್ ಹೇಳಿದ್ದಾರೆ. ಯೋಗ ದಿನಾಚರಣೆ ಮಾತ್ರವಲ್ಲ ಮೋದಿ ಅವರು ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಇದನ್ನೂ ಓದಿ: Narendra Modi: ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಮೋದಿ ನಾಳೆ ಕಾಶ್ಮೀರಕ್ಕೆ; ವ್ಯಾಪಕ ಕಟ್ಟೆಚ್ಚರ, ಡ್ರೋನ್ ಹಾರಾಟ ನಿಷೇಧ