Site icon Vistara News

Narendra Modi: ಭಾರತ ವಿಭಜನೆಯ ಕರಾಳ ದಿನ; ಬಾಧಿತರ ಧೈರ್ಯ, ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ: ಮೋದಿ

Narendra Modi

ನವದೆಹಲಿ: 1947ರ ಭಾರತದ ವಿಭಜನೆಯಿಂದ ಬಾಧಿತರಾದ ಲಕ್ಷಾಂತರ ಮಂದಿಗೆ ಇಂದು (ಆಗಸ್ಟ್‌ 14) ಪ್ರಧಾನಿ ನರೇಂದ್ರ ಮೋದಿ (Narendra Modi) ಗೌರವ ಸಲ್ಲಿಸಿದರು. “ವಿಭಜನೆಯ ಭೀಕರತೆಯಿಂದ ಬಳಲುತ್ತಿರುವ ಅಸಂಖ್ಯಾತ ಜನರನ್ನು ನಾವು ನೆನಪಿಸಿಕೊಳ್ಳುತ್ತೇವೆ ಮತ್ತು ಅವರ ಧೈರ್ಯಕ್ಕೆ ಗೌರವ ಸಲ್ಲಿಸುತ್ತೇವೆ. ಇದು ಮಾನವ ಸ್ಥಿತಿಸ್ಥಾಪಕತ್ವಕ್ಕೆ ಉದಾಹರಣೆಯಾಗಿದೆ” ಎಂದು ಮೋದಿ ಹೇಳಿದರು. ಏಕತೆ ಮತ್ತು ಭ್ರಾತೃತ್ವದ ವಿಚಾರದಲ್ಲಿ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು (Partition Horrors Remembrance Day).

1947ರ ಈ ದಿನದಂದು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, “ವಿಭಜನೆಯ ಭಯಾನಕ ಸ್ಮರಣೆಯ ದಿನವಾದ ಇಂದು, ವಿಭಜನೆಯಿಂದಾಗಿ ಹೆಚ್ಚು ತೊಂದರೆ ಅನುಭವಿಸಿದ ಅಸಂಖ್ಯಾತ ಜನರನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇದು ಅವರ ಧೈರ್ಯಕ್ಕೆ ಗೌರವ ಸಲ್ಲಿಸುವ ದಿನವಾಗಿದೆ. ಇದು ಮಾನವ ಸ್ಥಿತಿಸ್ಥಾಪಕತ್ವದ ಶಕ್ತಿಯನ್ನು ವಿವರಿಸುತ್ತದೆ. ವಿಭಜನೆಯಿಂದ ಪ್ರಭಾವಿತರಾದ ಬಹಳಷ್ಟು ಜನರು ತಮ್ಮ ಜೀವನವನ್ನು ಪುನರ್‌ ನಿರ್ಮಿಸಿದರು ಮತ್ತು ಅದರಲ್ಲಿ ಯಶಸ್ಸು ಗಳಿಸಿದರು. ರಾಷ್ಟ್ರದಲ್ಲಿ ಏಕತೆ ಮತ್ತು ಸಹೋದರತ್ವದ ಬಂಧಗಳನ್ನು ಯಾವಾಗಲೂ ರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆʼʼ ಎಂದು ಹೇಳಿದ್ದಾರೆ.

ಅಮಿತ್‌ ಶಾ ಹೇಳಿದ್ದೇನು?

ಗೃಹ ಸಚಿವ ಅಮಿತ್‌ ಶಾ ಕೂಡ ಈ ದಿನವನ್ನು ಸ್ಮರಿಸಿಕೊಂಡಿದ್ದಾರೆ. ʼʼವಿಭಜನೆ ಎನ್ನುವುದು ನಮ್ಮ ದೇಶದ ಇತಿಹಾಸದ ಅತ್ಯಂತ ನೋವಿನ ಅಧ್ಯಯನಗಳಲ್ಲಿ ಒಂದು ಎನಿಸಿಕೊಂಡಿದೆ. ಈ ವೇಳೆ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ, ಅನೇಕರಿಗೆ ಮನೆ-ಮಠ, ತಮ್ಮವರು ಇಲ್ಲದಾಗಿದ್ದಾರೆ. ತನ್ನ ಇತಿಹಾಸವನ್ನು ನೆನಪಿಸಿಕೊಳ್ಳುವ ರಾಷ್ಟ್ರವು ಉತ್ತಮ ಭವಿಷ್ಯವನ್ನು ನಿರ್ಮಿಸುತ್ತದೆ ಮತ್ತು ಶಕ್ತಿಶಾಲಿಯಾಗಿ ಹೊರಹೊಮ್ಮುತ್ತದೆʼʼ ಎಂದು ಬರೆದುಕೊಂಡಿದ್ದಾರೆ.

ಪ್ರತಿ ವರ್ಷ ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ನೆನಪಿನ ದಿನವಾಗಿ ಆಚರಿಸಲಾಗುತ್ತದೆ. ಆಗಸ್ಟ್ 15 ವಸಾಹತುಶಾಹಿ ಆಳ್ವಿಕೆಯಿಂದ ಭಾರತದ ವಿಮೋಚನೆಯ ವಾರ್ಷಿಕೋತ್ಸವವನ್ನು ಸೂಚಿಸಿದರೆ, ಆಗಸ್ಟ್ 14 ವಿಭಜನೆಯ ವಿನಾಶಕಾರಿ ಪರಿಣಾಮವನ್ನು ನೆನಪಿಸುತ್ತದೆ. ಸ್ವಾತಂತ್ರ್ಯದ ಆಚರಣೆಗಳಿಂದ ವಿಭಜನೆಯ ಭೀಕರತೆಯನ್ನು ಮರೆ ಮಾಡಲಾಗುವುದಿಲ್ಲ ಎನ್ನುವುದರ ಸ್ಮರಣೆಗಾಗಿ ಪ್ರಧಾನಿ ಮೋದಿ 2021ರಲ್ಲಿ ವಿಭಜನೆಯ ಭಯಾನಕ ಸ್ಮರಣೆ ದಿನವನ್ನು ಆಚರಿಸಲು ನಿರ್ಧಿಸಿದ್ದರು.

ಇದನ್ನೂ ಓದಿ: PM Narendra Modi: ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

ʼʼವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡರು. ದ್ವೇಷ ಮತ್ತು ಹಿಂಸೆಯಿಂದಾಗಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು. ನಮ್ಮ ಜನರ ಹೋರಾಟಗಳು ಮತ್ತು ತ್ಯಾಗಗಳ ನೆನಪಿಗಾಗಿ ಆಗಸ್ಟ್ 14 ಅನ್ನು ವಿಭಜನೆಯ ಭೀಕರ ಸ್ಮರಣಾರ್ಥ ದಿನವನ್ನಾಗಿ ಆಚರಿಸಲಾಗುವುದುʼʼ ಎಂದು ಅವರು ತಿಳಿಸಿದ್ದರು.

1947ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಸುಮಾರು 15 ಲಕ್ಷ ಜನರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಬೇಕಾಯಿತು. ವಿಶೇಷವಾಗಿ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಸಮೃದ್ಧವಾಗಿರುವ ಪಂಜಾಬ್‌ನಲ್ಲಂತೂ ಪರಿಸ್ಥಿತಿ ಭೀಕರವಾಗಿತ್ತು. ವಿಭಜನೆಯಿಂದಾಗಿ ಅನೇಕ ಕಡೆ ಗಲಭೆಗಳೂ ನಡೆದವು. ಈ ಗಲಭೆಗಳಿಂದಾಗಿ ಲಕ್ಷಾಂತರ ಜನರು ಸ್ಥಳಾಂತರಗೊಳ್ಳಬೇಕಾಯಿತು. ಈ ಅವಧಿಯಲ್ಲಿ ಹಲವು ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದರು.

Exit mobile version