Site icon Vistara News

Narendra Modi: ಸಿಬಿಐ ಸತ್ಯ, ನ್ಯಾಯದ ಬ್ರ್ಯಾಂಡ್‌; ನರೇಂದ್ರ ಮೋದಿ ಬಣ್ಣನೆ

Narendra Modi Praises CBI, Calls it A 'Brand For Truth And Justice'

ನರೇಂದ್ರ ಮೋದಿ

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆ (CBI) ಸೇರಿ ಹಲವು ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಿಬಿಐನ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಿಬಿಐ ಕಾರ್ಯಕ್ಷಮತೆ, ದಕ್ಷತೆಯನ್ನು ಕೊಂಡಾಡಿದ್ದಾರೆ. “ಸಿಬಿಐ ದೇಶದ ನ್ಯಾಯ ಹಾಗೂ ಸತ್ಯದ ಬ್ರ್ಯಾಂಡ್‌ ಆಗಿದೆ” ಎಂದು ಪ್ರಧಾನಿ ಬಣ್ಣಿಸಿದ್ದಾರೆ.

“ವೃತ್ತಿಪರ ಹಾಗೂ ಸಮರ್ಥ ಸಂಸ್ಥೆಗಳು ಇರದಹೊರತು ದೇಶವನ್ನು ಸುಭದ್ರವಾಗಿ ನಿರ್ಮಿಸಲು ಸಾಧ್ಯವಿಲ್ಲ. ಇಂತಹ ವೃತ್ತಿಪರತೆ ಹಾಗೂ ದಕ್ಷ ಸಂಸ್ಥೆಗಳಲ್ಲಿ ಸಿಬಿಐ ಕೂಡ ಒಂದಾಗಿದೆ. ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರವು ಬಹುದೊಡ್ಡ ತಡೆಗೋಡೆಯಾಗಿದೆ. ಈ ಗೋಡೆಯನ್ನು ಭೇದಿಸಿ, ಸತ್ಯ ಹಾಗೂ ನ್ಯಾಯವನ್ನು ಎತ್ತಿಹಿಡಿಯುವಲ್ಲಿ ಸಿಬಿಐ ಪಾತ್ರ ಬಹುಮುಖ್ಯವಾಗಿದೆ. ಅಷ್ಟಕ್ಕೂ, ಸತ್ಯ ಹಾಗೂ ನ್ಯಾಯಕ್ಕೆ ಸಿಬಿಐ ಬ್ರ್ಯಾಂಡ್‌ ಆಗಿದೆ” ಎಂದು ಹೇಳಿದರು.

“ಬ್ಯಾಂಕ್‌ ವಂಚನೆಗಳಿಂದ ಹಿಡಿದು, ವನ್ಯಜೀವಿಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಸಿಬಿಐ ಪಾತ್ರ ಹೆಚ್ಚಿದೆ. ಭ್ರಷ್ಟಾಚಾರದ ವಿರುದ್ಧ ಸರ್ಕಾರ ಸಾರಿರುವ ಸಮರಕ್ಕೆ ಸಿಬಿಐ ಬೆನ್ನೆಲುಬಾಗಿದೆ. ಸಾವಿರಾರು ಪ್ರಕರಣಗಳನ್ನು ಭೇದಿಸಿ, ಭ್ರಷ್ಟರನ್ನು ಜೈಲಿಗೆ ಕಳುಹಿಸುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿರುವ ಕಾರಣದಿಂದಲೇ ಸಿಬಿಐ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ” ಎಂದರು.

ಭ್ರಷ್ಟಾಚಾರ ಸಾಮಾನ್ಯ ಅಪರಾಧವಲ್ಲ

“ದೇಶದಲ್ಲಿ ಭ್ರಷ್ಟಾಚಾರವು ಸಾಮಾನ್ಯ ಅಪರಾಧವಲ್ಲ. ಇದು ಬಡವರ ಹಕ್ಕುಗಳನ್ನು, ಅವರಿಗೆ ಸಿಗುವ ಸೌಲಭ್ಯಗಳನ್ನು ಕಸಿಯುತ್ತದೆ. ಇದು ಬೇರೆ ಅಪರಾಧಗಳಿಗಿಂತ ಹೆಚ್ಚು ಭೀಕರವಾಗಿದೆ. ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವಕ್ಕೆ ಭ್ರಷ್ಟಾಚಾರ ಅಡ್ಡಗಾಲು ಆಗಿದೆ. ಯುವಕರು, ಅವರಲ್ಲಿರುವ ಪ್ರತಿಭೆಯನ್ನು ನಿರ್ನಾಮ ಮಾಡಲು ಭ್ರಷ್ಟಾಚಾರ ಪ್ರಮುಖ ಅಸ್ತ್ರವಾಗಿದೆ. ಇದು ಸ್ವಜನ ಪಕ್ಷಪಾತ, ಕುಟುಂಬ ವ್ಯವಸ್ಥೆಯ ರಚನೆಗೆ ಕಾರಣವಾಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಹಾಗಾಗಿ, ಇದರ ನಿರ್ಮೂಲನೆಗೆ ಕೇಂದ್ರ ಸರ್ಕಾರ ಪಣ ತೊಟ್ಟಿದೆ” ಎಂದು ಮೋದಿ ತಿಳಿಸಿದರು.

“ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ದೇಶದ ಅಭಿವೃದ್ಧಿಗೆ ವ್ಯಾಧಿಯಂತೆ ಕಾಡುತ್ತಿದೆ. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದ ನಿರ್ಮೂಲನೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ, ತನಿಖಾ ಸಂಸ್ಥೆಗಳಿಗೆ ಮುಕ್ತ ಅಧಿಕಾರ ನೀಡಲಾಗಿದೆ. ಹಾಗಾಗಿ, ಅಧಿಕಾರಿಗಳು ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಲು ಯಾವುದೇ ಹಿಂಜರಿಕೆ ಬೇಡ” ಎಂದು ತಿಳಿಸಿದರು.

ಇದನ್ನೂ ಓದಿ: Modi in Karnataka: ಸರ್‌. ಎಂ. ವಿಶ್ವೇಶ್ವರಯ್ಯ ಅವರ ಕುರಿತು ಹೊಸ ಮ್ಯೂಸಿಯಂ ನಿರ್ಮಾಣ: ಪ್ರಧಾನಿ ನರೇಂದ್ರ ಮೋದಿ ಭರವಸೆ

Exit mobile version