ಜೈಪುರ: ದೇಶದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಪ್ರತಿಪಕ್ಷಗಳ ನಾಯಕರನ್ನು, ರಾಜಕೀಯ ವಿರೋಧಿಗಳನ್ನು ಹೊಗಳುವುದು, ಅವರ ಗುಣವನ್ನು ಮೆಚ್ಚುವುದು ತುಂಬ ವಿರಳ. ರಾಜಕೀಯ ದ್ವೇಷ, ತಿಕ್ಕಾಟ, ಟೀಕೆ, ವ್ಯಂಗ್ಯ, ತಂತ್ರ, ಕುತಂತ್ರ, ಪ್ರತಿತಂತ್ರಗಳೇ ಇಂದಿನ ರಾಜಕೀಯದ ಶೈಲಿಯಾಗಿದೆ. ಇಂತಹ ಪರಿಸ್ಥಿತಿಯ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Modi Praises Gehlot) ಅವರನ್ನು ಹೊಗಳಿದ್ದಾರೆ. ಅಲ್ಲದೆ, ಗೆಹ್ಲೋಟ್ ಅವರನ್ನು ನನ್ನ ಗೆಳೆಯ ಎಂದು ಹೇಳಿದ್ದಾರೆ.
ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಜೈಪುರ ಜಂಕ್ಷನ್ ರೈಲು ನಿಲ್ದಾಣದಲ್ಲಿ ಆಯೋಜಿಸಲಾಗಿತ್ತು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವರ್ಚ್ಯುವಲ್ ಮೂಲಕ ನರೇಂದ್ರ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಇದಾದ ಬಳಿಕ ಮಾತನಾಡಿದ ಮೋದಿ, “ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಸಂದರ್ಭದಲ್ಲಿಯೂ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ, ಅಭಿವೃದ್ಧಿಗೆ ಸಮಯ ನೀಡಿದ್ದಕ್ಕಾಗಿ ಅಶೋಕ್ ಗೆಹ್ಲೋಟ್ ಅವರಿಗೆ ಕೃತಜ್ಞತೆಗಳು. ಅವರ ನಡೆಯನ್ನು ನಾನು ಸ್ವಾಗತಿಸುತ್ತೇನೆ” ಎಂದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮೋದಿ ಚಾಲನೆ
“ಅಶೋಕ್ ಗೆಹ್ಲೋಟ್ ಅವರ ಎರಡೂ ಕೈಯಲ್ಲಿ ಲಡ್ಡುಗಳು ಇವೆ. ರೈಲ್ವೆ ಸಚಿವರು ರಾಜಸ್ಥಾನದವರಿದ್ದಾರೆ, ರೈಲ್ವೆ ಮಂಡಳಿಯ ಅಧ್ಯಕ್ಷರು ಕೂಡ ರಾಜಸ್ಥಾನದವರೇ ಆಗಿದ್ದಾರೆ. ಹಾಗಾಗಿ, ರಾಜ್ಯದಲ್ಲಿ ರೈಲು ಅಭಿವೃದ್ಧಿಗೆ ಹೇರಳ ಅವಕಾಶಗಳಿವೆ. ಹಾಗೆಯೇ, ಅಶೋಕ್ ಗೆಹ್ಲೋಟ್ ಅವರು ನನ್ನ ಮೇಲೆ ನಂಬಿಕೆ ಇಟ್ಟು, ನಮ್ಮ ಗೆಳೆತನಕ್ಕೆ ಆದ್ಯತೆ ನೀಡಿ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ನಮ್ಮ ಸ್ನೇಹದ ಮೇಲೆ ನೀವು ನಂಬಿಕೆ ಇಟ್ಟಿರುವುದಕ್ಕೆ ಧನ್ಯವಾದ” ಎಂದು ಹೇಳಿದರು.
ಹೊಗಳಿಕೆ ಇದೇ ಮೊದಲಲ್ಲ
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಮೋದಿ ಹೊಗಳುತ್ತಿರುವುದು ಇದೇ ಮೊದಲಲ್ಲ. ಕಳೆದ ಡಿಸೆಂಬರ್‌ನಲ್ಲಿ ನಡೆದ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್‌ಗಳು ಹಾಗೂ ಮುಖ್ಯಮಂತ್ರಿಗಳ ಸಭೆಯಲ್ಲಿಯೂ ಮೋದಿ ಅವರು ಗೆಹ್ಲೋಟ್ ಅವರನ್ನು ಹೊಗಳಿದ್ದರು. ಉದಯಪುರದಲ್ಲಿ ಜಿ-20 ಸಭೆಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಕ್ಕಾಗಿ ಮೋದಿ ಶ್ಲಾಘಿಸಿದ್ದರು. ಹಾಗೆಯೇ, ಕೊರೊನಾ ಸೋಂಕಿನ ಬಿಕ್ಕಟ್ಟಿನ ನಿರ್ವಹಣೆಯ ವಿಷಯದಲ್ಲೂ ಮೋದಿ ಅವರು ಗೆಹ್ಲೋಟ್ ಅವರನ್ನು ಹೊಗಳಿದ್ದರು. ರಾಜಸ್ಥಾನದಲ್ಲಿ ಕೊರೊನಾ ನಿರ್ವಹಿಸಿದ ರೀತಿಯು ದೇಶಕ್ಕೇ ಮಾದರಿ ಎಂದು ಶ್ಲಾಘಿಸಿದ್ದರು.
ಇದನ್ನೂ ಓದಿ: Sachin Pilot: ಭ್ರಷ್ಟಾಚಾರ ವಿರುದ್ಧ ಸತ್ಯಾಗ್ರಹಕ್ಕೆ ಪೈಲಟ್ ಸಿದ್ಧತೆ; ರಾಜಸ್ಥಾನದಲ್ಲಿ ಮತ್ತೆ ಗೆಹ್ಲೋಟ್-ಸಚಿನ್ ಜಟಾಪಟಿ