ವಾರಾಣಸಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಶತಾಯ ಗತಾಯ ಹ್ಯಾಟ್ರಿಕ್ ಸಾಧಿಸುವ ಉತ್ಸಾಹದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಲೋಕಸಭೆ ಕ್ಷೇತ್ರವಾದ ವಾರಾಣಸಿಯಲ್ಲಿ ಬೃಹತ್ ರೋಡ್ ಶೋ (Modi Roadshow Live) ಕೈಗೊಂಡಿದ್ದಾರೆ. ಬನಾರಸ್ ಹಿಂದು ವಿಶ್ವವಿದ್ಯಾಲಯದ ಗೇಟ್‌ನಿಂದ ರೋಡ್ ಶೋ ಆರಂಭವಾಗದ್ದು, ಕಾಶಿ ವಿಶ್ವನಾಥ ಧಾಮದ ಗೇಟ್ ಸಂಖ್ಯೆ 4ರಲ್ಲಿ ರೋಡ್ ಶೋ ಮುಕ್ತಾಯಗೊಳ್ಳಲಿದೆ. ಮೋದಿ ಅವರನ್ನು ಕಣ್ತುಂಬಿಕೊಳ್ಳಲು ರಸ್ತೆಯುದ್ದಕ್ಕೂ ಸಾವಿರಾರು ಜನ ನೆರೆದಿದ್ದಾರೆ. ಮೋದಿ ಅವರಿಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಕೂಡ ಸಾಥ್ ನೀಡಿದ್ದಾರೆ.
ವಾರಣಾಸಿ ಲೋಕಸಭಾ ಕ್ಷೇತ್ರದ ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರು ರೋಡ್‌ಶೋನ ಭಾಗವಾಗಿದ್ದಾರೆ. ಮಹಿಳೆಯರ ಸಾಂಸ್ಕೃತಿಕ ನೃತ್ಯ, ಜೈ ಶ್ರೀರಾಮ್ ಎಂಬ ಘೋಷಣೆಗಳು ಸಾಮಾನ್ಯ ಎಂಬಂತಾಗಿದೆ. ನರೇಂದ್ರ ಮೋದಿ ಪರವೂ ಜನ ಘೋಷಣೆಗಳನ್ನು ಮೊಳಗಿಸಿದ್ದಾರೆ. ರೋಡ್ ಶೋ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪುಗಳು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಿವೆ. ಸುಮಾರು ಐದು ಕಿಲೋಮೀಟರ್ ಉದ್ದದ ರೋಡ್ ಶೋ ಮಿನಿ ಇಂಡಿಯಾ ಮತ್ತು ಉತ್ತರ ಪ್ರದೇಶದ ಸಂಸ್ಕೃತಿಗಳ ಒಂದು ನೋಟವನ್ನು ನೀಡಿದೆ.
ಮಂಗಳವಾರ (ಮೇ 14) ಬೆಳಗ್ಗೆ 11:40ಕ್ಕೆ ಪ್ರಧಾನಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಕಾಶಿಯ ಕಾಲ ಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ʼಅಭಿಜಿತ್ ಮಹೂರ್ತ’ವಾಗಿದ್ದು, ʼಆನಂದ ಯೋಗ’ದ ಅಡಿಯಲ್ಲಿ ಬರುತ್ತಿದ್ದು ಅತ್ಯಂತ ಮಂಗಳಕರ ಅವಧಿ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಅವರು ರೋಡ್ ಶೋ ನಡೆಸಿ ಜನರ ಗಮನ ಸೆಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂಡಿಯಾ ಒಕ್ಕೂಟ ಅಭ್ಯರ್ಥಿಯಾಗಿ ಅಜಯ್ ರೈ ಕಣದಲ್ಲಿದ್ದಾರೆ. ಅಜಯ್ ರೈ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಕಳೆದ ಎರಡು ಬಾರಿಯೂ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಪ್ರಧಾನಿ ಮೋದಿಯವರ ಗೆಲುವಿನ ಅಂತರವನ್ನು 7 ಲಕ್ಷಕ್ಕೂ ಮೀರಿ ಹೆಚ್ಚಿಸುವ ಗುರಿಯನ್ನು ಬಿಜೆಪಿ ಹೊಂದಿದೆ. 2019ರಲ್ಲಿ 64% ಮತ ಹಂಚಿಕೆಯೊಂದಿಗೆ ಮೋದಿಯವರು 4.8 ಲಕ್ಷ ಅಂತದಲ್ಲಿ ಗೆಲುವು ಸಾಧಿಸಿದ್ದರು. 2014ರಲ್ಲಿ ಅವರು 3.7 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.
ಇದನ್ನೂ ಓದಿ: PM Narendra Modi: “ಪಾಕ್ ಬಳೆ ತೊಡದಿದ್ದರೆ ನಾವು ತೊಡಿಸುತ್ತೇವೆ….” ಪಿಎಂ ಮೋದಿ ಗುಡುಗು