ನವ ದೆಹಲಿ: ಇಂದು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ದೆಹಲಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ʼಮಣ್ಣು ಸಂರಕ್ಷಿಸಿ ಆಂದೋಲನʼ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ಮಾತನಾಡಿದರು. ʼಜಾಗತಿಕವಾಗಿ ಹವಾಮಾನದಲ್ಲಿ ಅಪಾಯಕಾರಿಯಾಗಿ ಬದಲಾವಣೆಯಾಗುತ್ತಿದೆ. ಇದರಲ್ಲಿ ಭಾರತದ ಪಾತ್ರ ತೀರ ಅತ್ಯಲ್ಪವಾಗಿದೆ. ಹಾಗಿದ್ದಾಗ್ಯೂ ನಾವು ನಿರ್ಲಕ್ಷ್ಯ ಮಾಡುತ್ತಿಲ್ಲ. ಪರಿಸರ ಸಂರಕ್ಷಣೆಗಾಗಿ ವಿವಿಧ ಆಯಾಮಗಳಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಪ್ರಯತ್ನವನ್ನು ನಿರಂತರವಾಗಿ ಜಾರಿಯಲ್ಲಿಡಲಾಗಿದೆʼ ಎಂದು ಹೇಳಿದ ಪ್ರಧಾನಿ ಮೋದಿ, ʼಭಾರತದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಅರಣ್ಯ ಪ್ರದೇಶ 20 ಸಾವಿರ ಚದರ್ ಕಿಲೋಮೀಟರ್‌ಗಳಷ್ಟು ಹೆಚ್ಚಾಗಿದೆ. ವನ್ಯಜೀವಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆʼ ಎಂದು ತಿಳಿಸಿದರು.
ಮಣಿನ ಆರೋಗ್ಯ ಕಾರ್ಡ್ ಪ್ರಾಮುಖ್ಯತೆಯ ಮಹತ್ವವನ್ನು ಹೇಳಿದ ಪ್ರಧಾನಿ ಮೋದಿ, ಈ ಕಾರ್ಡ್‌ಗಳು ರೈತರ ಆಲೋಚನಾ ಕ್ರಮವನ್ನು ಬದಲಿಸುತ್ತಿವೆ. ಆರೋಗ್ಯ ಕಾರ್ಡ್‌ಗಳಿಂದಾಗಿ ರೈತರು ತಮ್ಮ ಕೃಷಿ ಭೂಮಿಯ ಮಣ್ಣಿನ ಸ್ಥಿತಿ, ಅದರಲ್ಲಿ ಎಷ್ಟು ಪ್ರಮಾಣದಲ್ಲಿ ಪೋಷಕಾಂಶಗಳಿವೆ?-ಯಾವೆಲ್ಲ ಅಂಶ ಸಂಯೋಜನೆಗೊಂಡಿವೆ? ಫಲವತ್ತತ್ತೆ ಎಷ್ಟಿದೆ? ಎಂಬಿತ್ಯಾದಿ ಸೂಕ್ಷ್ಮ ಅಂಶಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಅದರ ಆಧಾರದ ಮೇಲೆ ಮಣ್ಣಿನ ಆರೈಕೆಗೆ ತಾವು ಯಾವ ಕ್ರಮ ಕೈಗೊಳ್ಳಬೇಕು, ಯಾವ ಬೆಳೆ ಬೆಳೆಯಬೇಕು ಎಂಬುದನ್ನು ನಿರ್ಧರಿಸುತ್ತಿದ್ದಾರೆ ಎಂದು ಹೇಳಿದ ಪ್ರಧಾನಿ, ಮಣ್ಣಿನ ರಕ್ಷಣೆ, ಸತ್ವ ಕಾಪಾಡಲು ತಮ್ಮ ಸರ್ಕಾರ ಅಳವಡಿಸಿಕೊಂಡಿರುವ ಸೂತ್ರಗಳ ಬಗ್ಗೆ ತಿಳಿಸಿದರು.
1. ಮಣ್ಣನ್ನು ರಾಸಾಯನಿಕ ಮುಕ್ತಗೊಳಿಸುವುದು
2. ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳ ಸಂರಕ್ಷಣೆ ಮಾಡುವ ಬಗ್ಗೆ ಕೇಂದ್ರೀಕರಿಸುವುದು. ಇವು ಮಣ್ಣಿನ ಸಾವಯವ ಎಂದು ಕರೆಯಲ್ಪಡುತ್ತವೆ ಮತ್ತು ಮಣ್ಣಿನ ಸತ್ವ ಉಳಿಯಬೇಕೆಂದರೆ ಇವು ಇರಲೇಬೇಕು
3. ಮಣ್ಣಿನಲ್ಲಿ ತೇವಾಂಶವನ್ನು ಕಾಪಾಡುವುದು. ಅದಕ್ಕಾಗಿ ನೀರಿನ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳುವುದು.
4. ಅಂತರ್ಜಲ ಮಟ್ಟ ಕಡಿಮೆಯಾಗಿ ಮಣ್ಣು ಒಣಗಿ, ವ್ಯರ್ಥವಾಗುವುದನ್ನು ತಡೆಯುವುದು ಹೇಗೆ?
5. ಅರಣ್ಯ ಕಡಿಮೆಯಾದಷ್ಟೂ ಮಣ್ಣಿನ ಸೆವೆತ ಹೆಚ್ಚುತ್ತದೆ. ಇವೆರಡನ್ನೂ ನಿಯಂತ್ರಿಸಲು ಯಾವೆಲ್ಲ ಕ್ರಮ ಕೈಗೊಳ್ಳಬಹುದು?..-ಈ ಐದು ವಿಚಾರಗಳ ಮೇಲೆ ಕೇಂದ್ರ ಸರ್ಕಾರ ಗಮನ ಹರಿಸಿದೆ ಮತ್ತು ಸಾಮಾನ್ಯ ಜನರೂ ಮಣ್ಣಿನ ಜೀವ ಉಳಿಸಲು ತಮ್ಮ ಕೈಯಲ್ಲಾದ ಎಲ್ಲ ಪ್ರಯತ್ನ ಮಾಡಬೇಕು ಎಂದು ಪ್ರಧಾನಿ ಕರೆಕೊಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ
ಗಂಗಾ ನದಿ ಕಾರಿಡಾರ್ ಪ್ರದೇಶಗಳಲ್ಲಿ ನೈಸರ್ಗಿಕ ಕೃಷಿ ಉತ್ತೇಜನ ಮಾಡುವುದಾಗಿ ಈ ವರ್ಷ ಬಜೆಟ್‌ನಲ್ಲಿ ನಾವು ಘೋಷಿಸಿದ್ದೇವೆ. 13ನದಿಗಳ ಪುನಶ್ಚೇತನಕ್ಕೆ ಸಂಬಂಧಪಟ್ಟ ಯೋಜನೆಯನ್ನು ಮಾರ್ಚ್ ತಿಂಗಳಲ್ಲಿ ಪ್ರಾರಂಭಿಸಿದ್ದೇವೆ. ವನ್ಯಜೀವಿಗಳ ಸಂತತಿ ರಕ್ಷಣೆಗಾಗಿ ನಮ್ಮ ಸರ್ಕಾರ ಜಾರಿಗೆ ತಂದ ನೀತಿಗಳಿಂದಾಗಿ ಇಂದು ವನ್ಯ ಜೀವಿ ಸಂಖ್ಯೆಯನ್ನೂ ಏರಿಕೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ ಮೈಸೂರು; ಯೋಗಾಭ್ಯಾಸ ಪ್ರಾರಂಭ