ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೆಲ ದಿನಗಳ ಹಿಂದಷ್ಟೇ ಉತ್ತರಾಖಂಡದಲ್ಲಿರುವ ಕೇದಾರನಾಥನ ದರ್ಶನ ಪಡೆದಿದ್ದರು. ಇದೇ ವೇಳೆ ಅವರು ಧರಿಸಿದ್ದ ಸಾಂಪ್ರದಾಯಿಕ ಉಡುಪು ಎಲ್ಲರ ಗಮನ ಸೆಳೆದಿತ್ತು. ಅಷ್ಟೇ ಅಲ್ಲ, ನರೇಂದ್ರ ಮೋದಿ ಅವರು ಉತ್ತರಾಖಂಡಕ್ಕೆ ತೆರಳಿದ್ದಾಗ 13 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ, ಸೇನೆಯ ತಾತ್ಕಾಲಿಕ ಟೆಂಟ್‌ನಲ್ಲಿಯೇ ಇಡೀ ರಾತ್ರಿ ಕಳೆದರು ಎಂದು ತಿಳಿದುಬಂದಿದೆ.
“ನರೇಂದ್ರ ಮೋದಿ ಅವರು ಮನಾದಲ್ಲಿ, ಅದರಲ್ಲೂ 13 ಸಾವಿರ ಅಡಿ ಎತ್ತರದಲ್ಲಿ ಗಡಿ ರಸ್ತೆಗಳ ಸಂಸ್ಥೆಯ (BRO) ಸಣ್ಣ ಟೆಂಟ್‌ನಲ್ಲಿ ಇಡೀ ರಾತ್ರಿ ಕಳೆಯುತ್ತಾರೆ ಎಂಬುದು ಕೇಳಿ ಅಚ್ಚರಿಯಾಯಿತು. ಒಬ್ಬ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಆಫಿಸರ್ (AEE) ರ‍್ಯಾಂಕ್ ಅಧಿಕಾರಿಗೆ ನೀಡುವ ಟೆಂಟ್‌ನಲ್ಲಿ, ಅದರಲ್ಲೂ ಕನಿಷ್ಠ ಸೌಕರ್ಯಗಳಿರುವ ಟೆಂಟ್‌ನಲ್ಲಿ ಮೋದಿ ಇಡೀ ರಾತ್ರಿ ಕಳೆಯುತ್ತಾರೆ ಎಂಬುದು ಅಚ್ಚರಿ ತಂದಿತ್ತು. ಅದರಂತೆ, ಮೋದಿ ಇಡೀ ರಾತ್ರಿ 13 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ತಂಗಿದ್ದರು” ಎಂದು ಬಿಆರ್‌ಒ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಿಚಡಿ ಜತೆ ಊಟದಲ್ಲೇನಿತ್ತು?
ನರೇಂದ್ರ ಮೋದಿ ಅವರು ದೇಶದ ಯಾವುದೇ ಪ್ರದೇಶಕ್ಕೆ ಹೋದರೂ ಒಂದೋ ಅಲ್ಲಿನ ಸ್ಥಳೀಯ ವಿಶೇಷ ಆಹಾರ ಸೇವಿಸುತ್ತಾರೆ. ಇಲ್ಲವೇ, ತಾವು ಯಾವಾಗಲೂ ಸೇವಿಸುವ ಕಿಚಡಿ ಸೇವಿಸುತ್ತಾರೆ. ಅದರಂತೆ, ಉತ್ತರಾಖಂಡದಲ್ಲಿ ಮೋದಿ ಅವರಿಗಾಗಿ ನಿರ್ಮಿಸಿದ ಟೆಂಟ್‌ನಲ್ಲಿ ಅವರು ಕಿಚಡಿ, ಮಂಡ್ವೆ ರೊಟ್ಟಿ, ಸ್ಥಳೀಯ ಚಟ್ನಿ ಹಾಗೂ ಖೀರ್ ಸೇವಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಮೋದಿ ಅವರಿಗಾಗಿ ಬಿಆರ್‌ಒ ಕಾರ್ಮಿಕರು ಅಡುಗೆ ತಯಾರಿಸಿದ್ದರು ಎಂಬುದು ವಿಶೇಷವಾಗಿದೆ.
72 ಗಂಟೆಯಲ್ಲಿ ಟೆಂಟ್ ನಿರ್ಮಾಣ
ಮೋದಿ ತಂಗಿದ ಟೆಂಟ್‌ಅನ್ನು ಬಿಆರ್‌ಒ ಅಧಿಕಾರಿಗಳು ಕೇವಲ 72 ಗಂಟೆಯಲ್ಲಿ ಅಂದರೆ, ಮೂರು ದಿನದಲ್ಲಿ ನಿರ್ಮಿಸಲಾಗಿದೆ ಎಂದು ಬಿಆರ್‌ಒ ಅಧಿಕಾರಿಗಳು ತಿಳಿಸಿದ್ದಾರೆ. ಬಿಆರ್‌ಒ ಅಧಿಕಾರಿಗಳೇ ಟೆಂಟ್‌ಅನ್ನು ನಿರ್ಮಿಸಿದ್ದು, ಸಣ್ಣ ಹೀಟರ್ ಸೇರಿ ಕೆಲವೇ ಕೆಲವು ಸಾಮಾನ್ಯ ಸೌಕರ್ಯಗಳು ಅದರಲ್ಲಿ ಇದ್ದವು. ಹೀಟರ್ ಇದ್ದರೂ ಜೀರೊ ಟೆಂಪರೇಚರ್ ಇತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ | PM Modi | ಉತ್ತರಾಖಂಡ್ನಲ್ಲಿ ಪ್ರಧಾನಿ ಮೋದಿ; ಕೇದಾರನಾಥದಲ್ಲಿ ಪೂಜೆ, ವಿವಿಧ ಯೋಜನೆಗಳ ಉದ್ಘಾಟನೆ