ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಲೋಕಸಭೆ ಕ್ಷೇತ್ರಗಳನ್ನು ಗುರುತಿಸಿ ಪಕ್ಷ ಸಂಘಟನೆ ಮಾಡುವುದು, ನರೇಂದ್ರ ಮೋದಿ ಸರ್ಕಾರದ ಸಾಧನೆ ತಿಳಿಸುವುದು, ಪಕ್ಷದಲ್ಲಿ ಸಂಘಟನಾ ಶಕ್ತಿ ಇರುವವರಿಗೆ ಉನ್ನತ ಜವಾಬ್ದಾರಿ ನೀಡುವುದು ಸೇರಿ ಹಲವು ರೀತಿಯಲ್ಲಿ ತಂತ್ರ ರೂಪಿಸುತ್ತಿದೆ. ಇದರ ಬೆನ್ನಲ್ಲೇ, ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಜನರ ಮತ ಸೆಳೆಯಲು ನರೇಂದ್ರ ಮೋದಿ (Narendra Modi) ಅವರು ರಣತಂತ್ರ ರೂಪಿಸಿದ್ದಾರೆ.
ಹೌದು, 2024ರ ಜನವರಿ 26ರ ವೇಳೆಗೆ ನರೇಂದ್ರ ಮೋದಿ ಅವರು ಬೆಂಗಳೂರು ಸೇರಿ ಸುಮಾರು 42 ಕಡೆ ಬೃಹತ್ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಸುಮಾರು 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಥವಾ ಅದಕ್ಕಿಂತ ಹೆಚ್ಚಿನ ಹಣದ ಯೋಜನೆ, ಕಾಮಗಾರಿಗಳಿಗೆ ಮೋದಿ ಅವರು ಚಾಲನೆ ನೀಡಲಿದ್ದಾರೆ. ಆ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರದ ಯೋಜನೆ, ಅಭಿವೃದ್ಧಿಗಳನ್ನು ಮನವರಿಕೆ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬೆಂಗಳೂರಿನಲ್ಲೂ ಯೋಜನೆಗೆ ಚಾಲನೆ
ಬೆಂಗಳೂರು ಹಾಗೂ ಪುಣೆಯಲ್ಲಿ ಮೆಟ್ರೋ ಯೋಜನೆಗಳಿಗೆ ಚಾಲನೆ ನೀಡುವುದು ಕೂಡ ಮೋದಿ ಅವರ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಭಾಗವಾಗಿದೆ. ಹಾಗೆಯೇ, ಜಮ್ಮು-ಕಾಶ್ಮೀರದಲ್ಲಿ ಚೆನಾಬ್ ಸೇತುವೆ, ತಮಿಳುನಾಡಿನ ರಾಮೇಶ್ವರಂನಲ್ಲಿ ಪಂಬನ್ ರೈಲ್ವೆ ಯೋಜನೆ, ಅಮೃತಸರ-ಜಾಮ್‌ನಗರ ಎಕ್ಸ್‌ಪ್ರೆಸ್‌ವೇ, ದ್ವಾರಕಾ ಎಕ್ಸ್‌ಪ್ರೆಸ್‌ವೇ ಸೇರಿ ಹಲವು ಪ್ರಮುಖ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Rahul Gandhi: 2024ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ; ರಾಹುಲ್ ಗಾಂಧಿ ಭವಿಷ್ಯ
ಸಚಿವರಿಗೂ ಇದೆ 9 ತಿಂಗಳ ಟಾಸ್ಕ್
ಕೇಂದ್ರದ ಸಚಿವರಿಗೂ ನರೇಂದ್ರ ಮೋದಿ ಅವರು 9 ತಿಂಗಳ ಟಾಸ್ಕ್ ನೀಡಿದ್ದಾರೆ. ಸಚಿವರು ಒಂಬತ್ತು ತಿಂಗಳವರೆಗೆ ದೇಶಾದ್ಯಂತ ಸಂಚರಿಸಿ, ಕೇಂದ್ರ ಸರ್ಕಾರದ ಯೋಜನೆಗಳು, ಅವು ಹೇಗೆ ಜನರಲ್ಲಿ ಬದಲಾವಣೆ ತಂದಿವೆ ಎಂಬುದನ್ನು ಮನವರಿಕೆ ಮಾಡುವ ʼ9 ತಿಂಗಳ ಯಾತ್ರೆʼ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. “ಜನರಿಗೆ ಸರ್ಕಾರ ಯಾವ ಯೋಜನೆ ಜಾರಿಗೆ ತಂದಿದೆ ಎಂಬುದರ ಮಾಹಿತಿಗಿಂತ, ಯೋಜನೆಗಳಿಂದ ಜನರಿಗೆ ಹೇಗೆ ಅನುಕೂಲವಾಗಿದೆ ಎಂಬುದನ್ನು ಮನವರಿಕೆ ಮಾಡುವುದು ಮುಖ್ಯ” ಎಂಬುದಾಗಿ ಮೋದಿ ಅವರು ಸಚಿವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.