Site icon Vistara News

Narendra Modi: ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ; 3.0 ಯುಗಾರಂಭ!

Narendra Modi

Narendra Modi Takes Oath As Prime Minister Of India For The Third Time

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆದ ಬೆನ್ನಲ್ಲೇ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ (Narendra Modi Oath) ಸ್ವೀಕರಿಸಿದ್ದಾರೆ. ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣವಚನ ಬೋಧಿಸಿದಿರು. ಮೋದಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ನರೇಂದ್ರ ಮೋದಿ ಅವರ ಜತೆಗೆ ಹಲವು ಸಂಸದರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ 10 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಟಿಡಿಪಿ, ಜೆಡಿಯು, ಜೆಡಿಎಸ್‌ ಹಾಗೂ ಎಲ್‌ಜೆಪಿ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದ ಲೈವ್‌ ವೀಕ್ಷಣೆಗೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಎಲ್‌ಇಡಿ ಪರದೆ, ಟಿವಿಗಳ ವ್ಯವಸ್ಥೆ ಮಾಡಿದ್ದರು. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಲೇ ಭಾರತ್‌ ಮಾತಾ ಕೀ ಜೈ, ಮೋದಿ ಮೋದಿ ಎಂಬ ಘೋಷಣೆಗಳು ಮೊಳಗಿದವು.

ವಿದೇಶಿ ನಾಯಕರು ಭಾಗಿ

ಭಾರತದ ಸಾವಿರಾರು ಗಣ್ಯರ ಜತೆಗೆ ನೆರೆ ರಾಷ್ಟ್ರಗಳ ನಾಯಕರು ಕೂಡ ಭಾಗವಹಿಸಿದ್ದರು. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿದ್ದರು.

ಉದ್ಯಮಿಗಳು, ಗಣ್ಯರ ಉಪಸ್ಥಿತಿ

ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅದಾನಿ ಗ್ರೂಪ್‌ ಚೇರ್ಮನ್‌ ಗೌತಮ್‌ ಅದಾನಿ, ಬಾಲಿವುಡ್‌ ನಟರಾದ ಶಾರುಖ್‌ ಖಾನ್‌, ಅಕ್ಷಯ್‌ ಕುಮಾರ್‌, 12th ಫೇಲ್‌ ಸಿನಿಮಾ ಖ್ಯಾತಿ ವಿಕ್ರಾಂತ್‌ ಮಾಸ್ಸೆ, ಸೂಪರ್‌ ಸ್ಟಾರ್‌ ರಜನಿಕಾಂತ್‌ ಸೇರಿ ಹಲವು ಗಣ್ಯರು ರಾಷ್ಟ್ರಪತಿ ಭವನದಲ್ಲಿ ಉಪಸ್ಥಿತರಿದ್ದರು.

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 293 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ 272ರ ಮ್ಯಾಜಿಕ್‌ ನಂಬರ್‌ ಗೆರೆಯನ್ನು ದಾಟಿದೆ. ಇನ್ನು, ಕಳೆದ ಬಾರಿ 303 ಕ್ಷೇತ್ರಗಳಲ್ಲಿ ಜಯಿಸಿದ್ದ ಬಿಜೆಪಿಯ ಕ್ಷೇತ್ರಗಳು ಈ ಬಾರಿ 240ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ, 10 ವರ್ಷಗಳ ಬಳಿಕ ದೇಶದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಂತಾಗಿದೆ. ಇಂಡಿಯಾ ಒಕ್ಕೂಟವು 232 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ 99 ಕ್ಷೇತ್ರಗಳಲ್ಲಿ ಜಯ ಕಂಡು, ಎರಡನೇ ಬೃಹತ್‌ ಪಕ್ಷ ಎನಿಸಿದೆ.

ಇದನ್ನೂ ಓದಿ: Narendra Modi Live: ಸತತ 3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ; ಲೈವ್‌ ಇಲ್ಲಿ ವೀಕ್ಷಿಸಿ

Exit mobile version