ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ (Viksit Bharat Sankalp Yatra) ವೇಳೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಯುವ ಉದ್ಯಮಿಯೊಂದಿಗೆ ಸ್ವಲ್ಪ ಹೊತ್ತು ಸಮಯ ಕಳೆದರು. ಈ ವೇಳೆ ಮೋದಿ ಆದಾಯದ ಬಗ್ಗೆ ಕೇಳಿದಾಗ ವಿವರಗಳನ್ನು ಬಹಿರಂಗಪಡಿಸಲು ಅವರು ಸ್ವಲ್ಪ ಅನುಮಾನ ವ್ಯಕ್ತಪಡಿಸಿದರು. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಮೋದಿ, “ಚಿಂತಿಸಬೇಡಿ, ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆಗೆ ಬರುವುದಿಲ್ಲ” ಎಂದು ಹೇಳಿದರು.
ಸಂವಾದದ ವೇಳೆ ಮೋದಿ ವ್ಯವಹಾರ, ಆದಾಯ ಮತ್ತು ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಯೋಜನೆಗಳು ಜನ ಸಾಮಾನ್ಯರಿಗೆ ಹೇಗೆ ನೆರವಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಂಡರು. ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವ ಈ ಉದ್ಯಮಿ, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ತನಗೆ ಮತ್ತು ತನ್ನ ಕುಟುಂಬಕ್ಕೆ ಹೆಚ್ಚಿನ ಸಹಾಯ ಮಾಡಿದೆ ಎಂದು ತಿಳಿಸಿದರು. ಆಗ ಮೋದಿ ಅವರ ಆದಾಯದ ಬಗ್ಗೆ ವಿಚಾರಿಸಿದ್ದರು. ಅಂಗಡಿಗೆ ಪ್ರತಿ ದಿನ ಎಷ್ಟು ಗ್ರಾಹಕರು ಬರುತ್ತಾರೆ? ತಿಂಗಳಿಗೆ ಎಷ್ಟು ಆದಾಯ ಇದೆ? ಎಂದು ಕುತೂಹಲದಿಂದ ಕೇಳಿದರು. ಆಗ ಆ ಯುವ ಉದ್ಯಮಿ ತಡವರಿಸಿ, ತಾನು ಆದಾಯವನ್ನು ಲೆಕ್ಕ ಹಾಕಿಲ್ಲ ಎಂದು ತಿಳಿಸಿದರು. ಅದಕ್ಕೆ ನಗುತ್ತಾ ಮೋದಿ, ʼʼಆದಾಯದ ವಿಚಾರ ಬಹಿರಂಗ ಪಡಿಸಿದರೆ ಆದಾಯ ತೆರಿಗೆ ಅಧಿಕಾರಿಗಳ್ಯಾರೂ ಬರಲಾರರು. ಆದಾಯ ಬಹಿರಂಗ ಪಡಿಸಿದರೆ ಮೋದಿ ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳಿಂದ ರೈಡ್ ಮಾಡಿಸುತ್ತಾರೆ ಎಂದು ಕೆಲವರು ಆಲೋಚಿಸುತ್ತಾರೆʼʼ ಎಂದು ತಮಾಷೆ ಮಾಡಿದರು.
Income Tax 😂 pic.twitter.com/bTCU2W1rjG
— Amit Malviya (@amitmalviya) December 17, 2023
ಈ ಯುವ ಉದ್ಯಮಿ ಯುಪಿಎಸ್‌ಸಿ ಆಕಾಂಕ್ಷಿಯೂ ಹೌದು. ಅವರು ಕಾಮರ್ಸ್‌ನಲ್ಲಿ ಪದವಿ ಪಡೆದಿರುವುದಾಗಿಯೂ ತಿಳಿಸಿದರು. ಅಂಗಡಿ ನಡೆಯುವ ಜತೆಗೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುವುದಾಗಿಯೂ ಅವರು ಪ್ರಧಾನಿ ಬಳಿ ತಿಳಿಸಿದರು. ಈ ವೇಳೆ ಮಾತನಾಡಿದ ಮೋದಿ, ಆ ಯುವಕನ ಮುಖದಲ್ಲಿ ಕಳೆ ತುಂಬಿಕೊಂಡಿದೆ ಎಂದು ಹೇಳಿದರು. ಅದಕ್ಕೆ ಆ ಯುವಕ ಪ್ರತಿಕ್ರಿಯಿಸಿ, ಪ್ರಧಾನ ಮಂತ್ರಿ ಅವರನ್ನು ಭೇಟಿಯಾದ ಕಾರಣ ಈ ಸಂತೋಷ ಎದ್ದು ಕಾಣಿಸುತ್ತಿದೆ ಎಂದರು.
ಪ್ರಧಾನ ಮಂತ್ರಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಮೋದಿ ಆಯುಷ್ಮಾನ್ ಭಾರತ್, ಉಜ್ವಲ, ಪಿಎಂ ಸ್ವನಿಧಿ, ಮುದ್ರಾ ಮುಂತಾದ ಯೋಜನೆಗಳನ್ನು ಒಳಗೊಂಡ ಮಳಿಗೆಗಳಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಎರಡು ದಿನಗಳ ಭೇಟಿ
ಮೋದಿ ಎರಡು ದಿನಗಳ ಭೇಟಿಗಾಗಿ ವಾರಣಾಸಿಗೆ ತೆರಳಿದ್ದಾರೆ. ಭಾನುವಾರ ನಗರದಲ್ಲಿ ರೋಡ್ ಶೋ ನಡೆಸಿ ನಮೋ ಘಾಟ್‌ನಲ್ಲಿ ಕಾಶಿ ತಮಿಳು ಸಂಗಮಂ 2.0 ಅನ್ನು ಉದ್ಘಾಟಿಸಿದರು. ʼʼತಮಿಳುನಾಡು ಮತ್ತು ಕಾಶಿ ವಿಶೇಷ ಬಾಂಧವ್ಯವನ್ನು ಹಂಚಿಕೊಂಡಿವೆ. ನೀವೆಲ್ಲರೂ ಇಲ್ಲಿಗೆ ಬಂದಿರುವುದು ಕೇವಲ ಅತಿಥಿಗಳಿಗಿಂತ ಹೆಚ್ಚಾಗಿ ನನ್ನ ಕುಟುಂಬದ ಸದಸ್ಯರಾಗಿದ್ದೀರಿ. ಕಾಶಿ ತಮಿಳು ಸಂಗಮಕ್ಕೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಕಾಶಿ ತಮಿಳು ಸಂಗಮಂ ‘ಏಕ್ ಭಾರತ್, ಶ್ರೇಷ್ಠ ಭಾರತ್’ನ ಸ್ಫೂರ್ತಿಯನ್ನು ಹೆಚ್ಚಿಸಿದೆʼʼ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಬಗ್ಗೆ ಪ್ರಧಾನಮಂತ್ರಿ ಮಾಹಿತಿ ಸಂಗ್ರಹಿಸಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದಾಗಿ ತಿಳಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: PM Narendra Modi: ಇಂದು ಪ್ರಧಾನಿಯಿಂದ ʼಕೇಸರಿ ವಂದೇ ಭಾರತ್ʼ ರೈಲು ಉದ್ಘಾಟನೆ