Site icon Vistara News

Narendra Modi: ಸಚಿವರ ಜತೆ ಸೋಮವಾರ ಮೋದಿ ಸಭೆ; ಯಾರು ಪಾಸ್? ಯಾರಿಗೆ ಗೇಟ್‌ಪಾಸ್?‌

PM Narendra Modi

Narendra Modi Has Not Taken A Single Leave Since 2014: PMO's Reply To RTI Query

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಇನಿಲ್ಲದ ತಂತ್ರ ರೂಪಿಸುತ್ತಿದೆ. ಬಿಜೆಪಿಯಲ್ಲಿ ಹಲವು ನಾಯಕರಿಗೆ ಉನ್ನತ ಹುದ್ದೆಗಳನ್ನು ನೀಡುವುದು, ಬೂತ್‌ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು, ಹೊಸ ಮುಖಗಳಿಗೆ ಆದ್ಯತೆ ನೀಡುವುದು ಸೇರಿ ಸಚಿವ ಸಂಪುಟ ಪುನರ್‌ರಚನೆ ಮೂಲಕವೂ ಲೋಕಸಭೆ ಚುನಾವಣೆಗೆ ಕೇಂದ್ರ ಸರ್ಕಾರ ಸಿದ್ಧವಾಗುತ್ತಿದೆ. ಕೆಲವೇ ದಿನಗಳಲ್ಲಿ ಸಂಪುಟ ಪುನರ್‌ರಚನೆ ಮಾಡಲಾಗುತ್ತದೆ ಎಂಬ ಸುದ್ದಿಯ ಬೆನ್ನಲ್ಲೇ ಜುಲೈ 3ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಚಿವರ ಸಭೆ ಕರೆದಿರುವುದು ಕುತೂಹಲ ಕೆರಳಿಸಿದೆ.

ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸದಸ್ಯರ ಜತೆ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಅಭಿವೃದ್ಧಿ ಯೋಜನೆಗಳ ಜಾರಿ, ಜುಲೈ 20ರಿಂದ ಆರಂಭವಾಗುವ ಸಂಸತ್ ಮುಂಗಾರು ಅಧಿವೇಶನ ಸೇರಿ ಹಲವು ವಿಷಯಗಳನ್ನು ಮೋದಿ ಅವರು ಸಚಿವರ ಜತೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಮೋದಿ ಅವರ ಬಳಿ ಸಚಿವರ ಕಾರ್ಯಕ್ಷಮತೆ ಬಗ್ಗೆಯೂ ಮಾಹಿತಿ ಇದ್ದು, ಯಾರಿಗೆ ಗೇಟ್‌ಪಾಸ್‌ ಕೊಡಬೇಕು ಎಂಬುದನ್ನು ಸಭೆ ಬಳಿಕ ತೀರ್ಮಾನಿಸಲಾಗುತ್ತದೆ ಎನ್ನಲಾಗುತ್ತಿದೆ. ಜುಲೈ 20ರಿಂದ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಇದಕ್ಕೂ ಮೊದಲೇ ಸಂಪುಟ ಪುನರ್‌ರಚನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟದಲ್ಲಿ ಯಾವ ರಾಜ್ಯಕ್ಕೆ ಆದ್ಯತೆ?

ಲೋಕಸಭೆ ಚುನಾವಣೆ ದೃಷ್ಟಿಯಿಂದ ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟವನ್ನು ಪುನರ್‌ರಚನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶದ ನಾಲ್ವರು, ಮಧ್ಯಪ್ರದೇಶದ ಒಬ್ಬರು, ರಾಜಸ್ಥಾನ ಹಾಗೂ ಮಹಾರಾಷ್ಟ್ರದ ತಲಾ ಇಬ್ಬರಿಗೆ ಸಚಿವ ಸ್ಥಾನ ನೀಡುವುದು ರಣತಂತ್ರವಾಗಿದೆ. ಆ ಮೂಲಕ ಈ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿ, ಇದರ ಲಾಭವನ್ನು ಚುನಾವಣೆಯಲ್ಲಿ ಗಳಿಸುವುದು ಪಕ್ಷದ ಅಜೆಂಡಾ ಎಂಬ ಮಾತುಗಳು ಕೇಳಿಬಂದಿವೆ.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಈಗಾಗಲೇ ಬಿಜೆಪಿ ಹಿರಿಯ ನಾಯಕರು ಸಭೆ ನಡೆಸಿ ತೀರ್ಮಾನಿಸಿದ್ದಾರೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಆಕ್ರೋಶ ಕೇಳಿಬರುತ್ತವೆ. ಇದೇ ರೀತಿ ಬೇರೆ ರಾಜ್ಯಗಳಲ್ಲೂ ರಾಜ್ಯಾಧ್ಯಕ್ಷರ ಬದಲಾವಣೆಗೆ ಕೂಗು ಕೇಳಿಬರುತ್ತಿದೆ. ಹಾಗಾಗಿ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version